Raichur | ಮೊರಾರ್ಜಿ ವಸತಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

ರಾಯಚೂರು: ಯರಮರಸ್ ಕ್ಯಾಂಪ್‌ನ ಸರ್ಕಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸುವ ಮೂಲಕ ಶಾಲಾ ಸಂಸತ್ತನ್ನು ರಚಿಸಲಾಯಿತು.
ಚುನಾವಣೆ ಪ್ರಕ್ರಿಯೆಯನ್ನು ಮತದಾರರ ಪಟ್ಟಿ, ಬ್ಯಾಲೆಟ್ ಪೇಪರ್, ಮತಮುದ್ರೆ, ಶಾಹಿ, ಗುರುತಿನ ಚೀಟಿ ಹಾಗೂ ಮತಪೆಟ್ಟಿಗೆ ಸೇರಿದಂತೆ ಎಲ್ಲ ಚುನಾವಣಾ ವ್ಯವಸ್ಥೆಗಳೊಂದಿಗೆ ಅಚ್ಚುಕಟ್ಟಾಗಿ ನಡೆಸಲಾಯಿತು.
ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ತತ್ವಗಳು ಹಾಗೂ ಮತದಾನದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಚುನಾವಣಾ ಪ್ರಕ್ರಿಯೆಯ ಪ್ರಾತ್ಯಕ್ಷಿಕೆಯನ್ನೂ ಆಯೋಜಿಸಲಾಯಿತು. ಶಾಲೆಯ ಪ್ರಾಂಶುಪಾಲ ಅಲಿ ಚಂದ್ ಮತಗಟ್ಟೆ ಅಧಿಕಾರಿಯಾಗಿ ಹಾಗೂ ಯೇಸ್ಸಪ್ಪ ಸಹಾಯಕ ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಶಾಲಾ ಸಂಸತ್ತಿನ ನೂತನ ಸಚಿವ ಸಂಪುಟ :
ಶಾಲಾ ಸಂಸತ್ತಿನ ಪ್ರಧಾನಮಂತ್ರಿಯಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಲೀಮಾ ಆಯ್ಕೆಯಾಗಿದ್ದು, ಉಪ ಪ್ರಧಾನಮಂತ್ರಿಯಾಗಿ ಸುನೀಲ್ ಕುಮಾರ ಆಯ್ಕೆಯಾದರು.
ಗೃಹ ಸಚಿವರಾಗಿ ಶಾಲಂಬೀ, ವಿನಾಯಕ ಹಾಗೂ ಸೃಷ್ಟಿ; ಆರೋಗ್ಯ ಸಚಿವರಾಗಿ ಕೆ. ಬಾನು, ಸಾಗರ್ ಮತ್ತು ಅನಿತಾ; ಹಣಕಾಸು ಸಚಿವರಾಗಿ ಪ್ರಗತಿ, ಐಶ್ವರ್ಯ ಹಾಗೂ ಅಫ್ರಾ ಬೇಗಂ; ಆಹಾರ ಸಚಿವರಾಗಿ ರವಿ, ಕೆ. ಲತೀಶ್, ಸುವರ್ಣ ಹಾಗೂ ನಾಗರಾಜ; ಶಿಕ್ಷಣ ಸಚಿವರಾಗಿ ವಂದನಾ, ಜೋಯ ಅಖ್ತರ್ ಹಾಗೂ ಆಕಾಶ್; ಕ್ರೀಡಾ ಸಚಿವರಾಗಿ ಲಾಡ್‌ಖಾನ್, ಕಿಶನ್ ರಾಠೋಡ್ ಹಾಗೂ ಅಂಕಿತ್; ಪರಿಸರ ಸಚಿವರಾಗಿ ವಿಶಾಲಮ್ಮ, ಪವನ್ ಹಾಗೂ ದಿವ್ಯಭಾರತಿ; ಪ್ರವಾಸೋದ್ಯಮ ಸಚಿವರಾಗಿ ಫರೀದಾ, ಸೂರಜ್ ಹಾಗೂ ಇಮ್ತಿಯಾಜ್; ಸಾಂಸ್ಕೃತಿಕ ಸಚಿವರಾಗಿ ಮದಿಯಾ, ಅಲ್ಲಾಭೀಬಾನು ಹಾಗೂ ಹೃತಿಕ್ ಅಧಿಕಾರ ಸ್ವೀಕರಿಸಿದ್ದಾರೆ.
ಈ ಕುರಿತು ಶಾಲೆಯ ಪ್ರಾಂಶುಪಾಲ ಅಲಿ ಚಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






