ರಾಯಚೂರು: ಯಲಹಂಕ ಕೋಗಿಲು ಲೇಔಟ್ ಮನೆಗಳ ಧ್ವಂಸ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ

ರಾಯಚೂರು:ಬೆಂಗಳೂರು ಯಲಹಂಕ ವಿಧಾನಸಭಾ ಕ್ಷೇತ್ರದ ಕೋಗಿಲು ಲೇಔಟ್‌ನ ಫಕೀರ್ ಕಾಲೊನಿಯಲ್ಲಿ ನೂರಾರು ಮನೆಗಳನ್ನು ಧ್ವಂಸಗೊಳಿಸಿದ ಸರ್ಕಾರದ ಕ್ರಮವನ್ನು ಖಂಡಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಸರಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ನಿರಾಶ್ರಿತರಿಗೆ ನ್ಯಾಯ ಒದಗಿಸಬೇಕು ಎಂದು ಧಿಕ್ಕಾರ ಹಾಕಿ ಆಗ್ರಹಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅಕ್ಬರ್ ನಾಗುಂಡಿ, ಮನೆಗಳನ್ನು ಬುಲ್ಡೋಜರ್ ಮೂಲಕ ಏಕಾಏಕಿ ದ್ವಂಸಗೊಳಿಸಿದ್ದು ಕಾನೂನುಬಾಹಿರ ಕ್ರಿಯೆಯಾಗಿದೆ. ಧ್ವಂಸಕ್ಕೆ ಮೊದಲು ನಿವಾಸಿಗಳಿಗೆ ಯಾವುದೇ ನೋಟಿಸ್ ನೀಡಿಲ್ಲ. ಮನೆಗಳನ್ನು ಒಳಗಿನ ವಸ್ತುಗಳೊಡನೆ ಧ್ವಂಸಗೊಳಿಸಿರುವುದರಿಂದ ಭಾರೀ ನಷ್ಟ ಸಂಭವಿಸಿದೆ. ಧ್ವಂಸ ನಂತರವೂ ಸರ್ಕಾರದಿಂದ ಯಾವುದೇ ಪರ್ಯಾಯ ವ್ಯವಸ್ಥೆ ಅಥವಾ ಪುನರ್ವಸತಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಜನರು ಕಾಂಗ್ರೆಸ್ ಪಕ್ಷವನ್ನು ಜನಪರ ಕಾಳಜಿಯುಳ್ಳ ಪಕ್ಷವೆಂದು ಪ್ರಚಂಡ ಬಹುಮತದಿಂದ ಗೆಲ್ಲಿಸಿದ್ದಾರೆ ಆದರೆ ಸರಕಾರ ಯುಪಿ ಮಾಡೆಲ್ ರೀತಿಯಲ್ಲಿ ಕ್ರಮಕೈಗೊಂಡಿದ್ದು ಜನವಿರೋಧಿ ಸರಕಾರವಾಗಿದೆ ಎಂದು ಸಾಬೀತಾಗಿದೆ. ಕೂಡಲೇ ಸರಕಾರ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು ಇಲ್ಲದಿದ್ದರೆ ಎಸ್ ಡಿಪಿಐ ವತಿಯಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗೌಸ್, ತೌಸಿಫ್ ಅಹ್ಮದ್ , ಮಹಮ್ಮದ್ ಶಫಿ, ಇರ್ಫಾನ್ ಇನ್ನಿತರರು ಇದ್ದರು





