ರಾಯಚೂರು | ಸಾಲಗುಂದ ಗ್ರಾಮದಲ್ಲಿ ಸೀರತ್ ಅಭಿಯಾನ

ರಾಯಚೂರು: ಜಮಾಅತೆ ಇಸ್ಲಾಮಿ ಹಿಂದ್ – ಸಿಂಧನೂರು ವತಿಯಿಂದ ಸೀರತ್ ಅಭಿಯಾನದ ಅಂಗವಾಗಿ ಸಾಲಗುಂದ ಗ್ರಾಮದ ಮಸ್ಜಿದ್ ಏ ಕೌಸರ್‌ನಲ್ಲಿ ‘ಪೈಗಂಬರ್ ಮುಹಮ್ಮದ್ (ಸ.ಅ) – ನ್ಯಾಯದ ಹರಿಕಾರ’ ಎಂಬ ಶೀರ್ಷಿಕೆಯಡಿ ಗ್ರಾಮ ಮಟ್ಟದ ಸಾರ್ವಜನಿಕ ಸಭೆ ಬುಧವಾರ ಏರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ಜನಾಬ್ ಲಾಲ್ ಹುಸೇನ್ ಸಾಬ್ ಕಂದಗಲ್ ಮಾತನಾಡಿ, ಪ್ರವಾದಿ ಮುಹಮ್ಮದ್ (ಸ.ಅ) ಧರ್ಮ, ಜಾತಿ, ಭಾಷೆ, ವರ್ಣ ಇತ್ಯಾದಿ ಬೇಧವಿಲ್ಲದೆ ಎಲ್ಲರಿಗೂ ಸಮಾನ ನ್ಯಾಯ ನೀಡಿದ ಬಗ್ಗೆ ವಿವರಿಸಿದರು. ನ್ಯಾಯವೆಂದರೆ ಕೇವಲ ಶಿಕ್ಷೆ ನೀಡುವುದಲ್ಲ. ಬಡವರ ಹಕ್ಕುಗಳನ್ನು ಕಾಪಾಡುವುದು, ಸತ್ಯವನ್ನು ಬೆಂಬಲಿಸುವುದು ಮತ್ತು ತಪ್ಪನ್ನು ತಡೆದು ನಿಲ್ಲಿಸುವುದೆಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವೇದಮೂರ್ತಿ ಶ್ರೀ ಕುಮಾರಸ್ವಾಮಿ ಕಂಬಾಳಿಮಠ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಹಿಂದು–ಮುಸ್ಲಿಂ ಸೌಹಾರ್ದದ ಸಂದೇಶವನ್ನು ಬಲಪಡಿಸಿದರು. ಗ್ರಾಮದ ಗಣ್ಯರು ಹಾಗೂ ವಿವಿಧ ಸಮಾಜದ ಬಾಂಧವರು ಹಾಜರಿದ್ದು, ಕಾರ್ಯಕ್ರಮಕ್ಕೆ ಗೌರವ ಹೆಚ್ಚಿಸಿದರು.
ಮಸ್ಜಿದ್ ಏ ಕೌಸರ್‌ನ ಇಮಾಮರಾದ ಸದ್ದಾಂ ಹುಸೇನ್ ಪವಿತ್ರ ಕುರಾನ್ ಪಠಿಸಿದರು. ಮೌಲಾ ಸಾಬ್ ಪರಾಪುರ ಅವರು ಕಾರ್ಯಕ್ರಮ ನಿರೂಪಣೆ ನಡೆಸಿ, ಕೊನೆಯಲ್ಲಿ ಜನಾಬ್ ದಿಲಾವರ್ ಅಂಬರ್ ಖಾನ್ ಧನ್ಯವಾದ ಸಲ್ಲಿಸಿದರು.





