ರಾಯಚೂರು | ನಕಲಿ ದಾಖಲೆ ಸೃಷ್ಠಿಸಿ ಆಸ್ತಿ ಮಾರಾಟ : ಆರೋಪಿಯ ಬಂಧನ

ಬಂಧಿತ ಆರೋಪಿ
ರಾಯಚೂರು, ಆ.10: ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಆಸ್ತಿಯನ್ನು ಮಾರಾಟ ಮಾಡಿದ ಆರೋಪದ ಮೇಲೆ 8 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಒರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಯಚೂರು ತಾಲೂಕಿನ ಚಂದ್ರಬಂಡಾ ಹೋಬಳಿಯ ಶಾಖವಾದಿ ಗ್ರಾಮದ ಸರ್ವೆ 84 ರಲ್ಲಿರುವ ಖಾಸಿಂಸಾಬ್ ಗೂಡ್ಸಾಬ್ ಎಂಬವರ ಹೆಸರಿನ ಜಮೀನನ್ನು ಆಸ್ತಿ ಬದಲಾವಣೆ ಮಾಡಲಾಗಿದೆ. ಖಾಸಿಂಸಾಬ್ 2013ರಲ್ಲಿ ಮೃತರಾಗಿದ್ದರೂ ಆಸ್ತಿಯನ್ನು ನೋಂದಣಿ ಮಾಡಿಕೊಂಡಿರುವ ಕುರಿತು ನಗರದ ಪಶ್ಚಿಮ ಠಾಣೆಯಲ್ಲಿ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ಎಂ.ಡಿ.ಜಾವೀದ್, ನಕಲಿ ಖಾಸಿಂಸಾಬ್, ಅಕ್ಷಯ ಕುಮಾರ ಭಂಡಾರಿ(ಆರೋಪಿ 3) ಸಬ್ ರಿಜಿಸ್ಟ್ರಾರ್ ಸಿಬ್ಬಂದಿ ಸಲೀಂ ಮೊಹಿನುದ್ದೀನ್, ಸಬ್ ರಿಜಿಸ್ಟ್ರಾರ್ಕಚೇರಿಯ ಕೋಸಗಿ ನಾರಾಯಣ, ಎಸ್ಡಿಸಿ ಸುರೇಶ, ಪ್ರಹ್ಲಾದ ವಕೀಲ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಾಖಾವಾದಿ ಖಾಜಾಬೀ ಎಂಬವರು ನೀಡಿದ ದೂರಿನ ಮೇರೆಗೆ ದೂರು ದಾಖಲಾಗಿದೆ. 2013ರ ಅ.2ರಂದು ಖಾಸಿಂಸಾಬ್ ಗುಡ್ಸಾಬ್ ನಿಧನರಾಗಿದ್ದು, ಜಮೀನು ಆಸ್ತಿ ಇನ್ನೂ ಪತ್ನಿ ಹೆಸರಿನಲ್ಲಿ ವರ್ಗಾವಣೆಯಾಗಿಲ್ಲ. ಆದರೂ ನಕಲಿ ಆಧಾರ್ ಕಾರ್ಡ್, ಸತ್ತುಹೋದ ವ್ಯಕ್ತಿ ಜೀವಂತವಾಗಿರುವುದಾಗಿ ವ್ಯಕ್ತಿಯೊಬ್ಬರನ್ನು ಸಬ್ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ ಭಾಗಿಯಾಗಿ ಆಸ್ತಿಯನ್ನು ಜಿಪಿಎ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಕಲಿ ಜಿಪಿಎ ಸೃಷ್ಟಿಸಿರುವ ಆರೋಪದ ಮೇಲೆ ಅಹೇಸಾನ್ ಅಹ್ಮದ್ ಹಸೀಬ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.







