ರಾಯಚೂರು | ಹಿರಿಯ ನಾಗರಿಕರ ಡೇ ಕೇರ್ ಕೇಂದ್ರ ಉದ್ಘಾಟನೆ
ಹಿರಿಯ ನಾಗರಿಕರು ಡೇ ಕೇರ್ ಕೇಂದ್ರದ ಸದುಪಯೋಗ ಪಡೆದುಕೊಳ್ಳಿ : ಮಾಜಿ ಶಾಸಕ ಎ.ಪಾಪಾರೆಡ್ಡಿ

ರಾಯಚೂರು : ನಗರದ ಎಪಿಎಂಸಿ ವ್ಯಾಪ್ತಿಯ ಆವರಣದಲ್ಲಿ ಹಿರಿಯ ನಾಗರಿಕರ ಇಲಾಖೆಯ ಯೋಗ ಕ್ಷೇಮಕೇಂದ್ರ ಹಾಗೂ ಸುರಕ್ಷಾ ಸಂಸ್ಥೆಯ ಸಹಯೋಗದಲ್ಲಿ ಇಂದು ಹಿರಿಯ ನಾಗರಿಕರ ಡೇ ಕೇರ್ ( ಶ್ರಮಿಕ ಭವನ) ಉದ್ಘಾಟನೆ ಮಾಡಲಾಯಿತು.
ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರು ಡೇ ಕೇರ್ ಕೇಂದ್ರವನ್ನು ಉದ್ಘಾಟಿಸಿದರು. ಈ ವೇಳೆ ಅವರು ಮಾತನಾಡಿ, ಸರ್ಕಾರ ಹಾಗೂ ಸುರಕ್ಷಾ ಸರ್ಕಾರೇತರ ಸಹಯೋಗದಲ್ಲಿ ಹಿರಿಯ ನಾಗರಿಕರಿಗಾಗಿ ಡೇಕೇರ್ ಕೇಂದ್ರ ಆರಂಭಿಸಿ ಇಲ್ಲಿನ ಗಂಜ್ ಹಮಾಲಿಕಾರ್ಮಿಕರಿಗೆ, ಹಿರಿಯ ನಾಗರಿಕರಿಗೆ ಮನರಂಜನೆ, ಗ್ರಂಥಾಲಯ, ಆರೋಗ್ಯ ತಪಾಸಣೆಯಂತಹ ಸೌಲಭ್ಯ ನೀಡಿ ಅವರ ವಿಶ್ರಾಂತಿ ಹಾಗೂ ಮಾನಸಿಕ ಆರೋಗ್ಯ ಕಾಪಾಡಲು ಮುಂದಾಗಿರುವುದು ಶ್ಲಾಘನೀಯ. ಹಮಾಲರು ಹಾಗೂ ಹಿರಿಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸುರಕ್ಷಾ ಸಂಸ್ಥೆಯ ಪವನ್ ಪಾಟೀಲ ಮಾತನಾಡಿ, ಹಿರಿಯ ನಾಗರಿಕರು ಹಾಗೂ ಹಮಾಲರು ಸದಸ್ಯತ್ವ ಪಡೆದು ಡೇಕೇರ್ ಕೇಂದ್ರದ ಉಪಯೋಗಿಸಿಕೊಳ್ಳಬಹುದು, ಇಲ್ಲಿ ವಾರಕ್ಕೊಮ್ಮೆಆರೋಗ್ಯ ತಪಾಸಣೆ, ಮಧ್ಯಾಹ್ನದ ಊಟ, ಒಳಾಂಗಣ ಕ್ರೀಡೆ, ಮನೋರಂಜನೆಗೆ ಕ್ಯಾರಂ ಬೋರ್ಡ್, ಚೆಸ್, ಟಿ.ವಿ ಇಡಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗದರ್ ಬೆಟ್ಟಪ್ಪ, ತಿಮ್ಮಾ ರೆಡ್ಡಿ, ಶ್ರೀನಿವಾಸ್ ಪೋಗಲ್, ಲಕ್ಷ್ಮಿ ರೆಡ್ಡಿ, ರೋಟರಿ ಕ್ಲಬ್‌ನ ಸಂಪತ್ ಕುಮಾರ್, ಮಲ್ಲಿಕಾರ್ಜುನ್ ಗಣೇಕಲ್, ತಿರುಮಲ್ ರೆಡ್ಡಿ, ದಸ್ತಗೀರ್ ಸಬ್, ಶ್ರೀನಿವಾಸ್ ಜಲಗರ್ ಮತ್ತು ಎನ್‌ಜಿಒ ಸಿಬ್ಬಂದಿ ಉಪಸ್ಥಿತರಿದ್ದರು.







