ರಾಯಚೂರು: ರಸ್ತೆ ಇಕ್ಕಟ್ಟಿನಿಂದ ಸರಣಿ ಅಪಘಾತ; ವಾಹನಗಳಿಗೆ ಹಾನಿ

ರಾಯಚೂರು: ಮೂರು ಲಾರಿ,ಬೈಕ್,ಮತ್ತು ಬೊಲೆರೋ ನಡುವೆ ಅಪಘಾತ ಸಂಭವಿಸಿದ ಘಟನೆ ಲಿಂಗಸೂಗೂರು ತಾಲ್ಲೂಕು ಗೋಲಪಲಿ ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಬೆಳಗಿನ ಜಾವ ನಡೆದಿದೆ.
ಮೂರು ದಿನಗಳ ಹಿಂದೆ ಪಲ್ಟಿಯಾಗಿದ್ದ ಲಾರಿಯ ಅವಶೇಷಗಳು ಇನ್ನೂ ರಸ್ತೆ ಬದಿಯಲ್ಲಿ ತೆರವುಗೊಳ್ಳದೆ ಇರುವ ಪರಿಣಾಮವಾಗಿ ಇಂದು ಬೆಳಿಗ್ಗೆ ರಸ್ತೆ ಇಕ್ಕಟ್ಟು ಉಂಟಾಗಿತ್ತು. ಈ ಸಂದರ್ಭದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ದಾರಿ ಕೊಡಲು ಬೊಲೆರೋ ವಾಹನ ನಿಂತಿತ್ತು. ಬೊಲೆರೋ ಹಿಂದೆ ಬೈಕ್ ನಿಂತಿದ್ದು, ಇದಕ್ಕೆ ಹಿಂಬದಿಯಿಂದ ವೇಗವಾಗಿ ಬಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ.
ರಸ್ತೆ ಇಕ್ಕಟ್ಟಿನಿಂದ ಪಾಸಾಗಲು ಯತ್ನಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಲಾರಿಗಳ ಮಧ್ಯೆ ಸಿಲುಕಿದ ಪರಿಣಾಮ ಬೊಲೆರೋ ಮತ್ತು ಬೈಕ್ ಹಾನಿಗೊಳಗಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಟ್ರಾಫಿಕ್ ನಿಯಂತ್ರಣ ನಡೆಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ ಎನ್ನಲಾಗಿದೆ.
ಸ್ಥಳೀಯ ನಿವಾಸಿಯೊಬ್ಬರು ಮಾತನಾಡಿ, ಬೀದರ್ - ಶ್ರೀರಂಗಪಟ್ಟಣ ಹೋಗುವ ರಾಷ್ಟ್ರೀಯ ಹೆದ್ದಾರಿಯ (150 ಎ) ಗೋಲಪ್ಪಲ್ಲಿ ಗ್ರಾಮದ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನವೂ ಸಣ್ಣ–ದೊಡ್ಡ ಅಪಘಾತಗಳು ಸಂಭವಿಸುತ್ತಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಸ್ತೆ ಅಗಲ ಕಡಿಮೆಯಿರುವುದರಿಂದ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ.
ಗೋಲಪ್ಪಲ್ಲಿ ರಸ್ತೆಯು ಹೆದ್ದಾರಿಯ ಮುಖ್ಯ ರಸ್ತೆಯಾಗಿದ್ದು ಜನರ ಸಂಚಾರಕ್ಕೂ ಪ್ರಮುಖವಾಗಿದೆ. ದಿನದಿಂದ ದಿನಕ್ಕೆ ವಾಹನ ಸಂಚಾರ ಜಾಸ್ತಿಯಾಗುತ್ತಿದೆ. ಆದರೆ, ರಸ್ತೆಯ ಅಗಲ ಅಲ್ಪವಾಗಿರುವುದರಿಂದ ಎರಡೂ ಬದಿಯಿಂದ ಬರುವ ವಾಹನಗಳು ಢಿಕ್ಕಿಯಾಗುವ ಸಂದರ್ಭಗಳು ಹೆಚ್ಚಾಗಿವೆ. ಇದರಿಂದಾಗಿ ಕಳೆದ ಕೆಲವು ತಿಂಗಳಲ್ಲಿ ಹಲವು ಜೀವ ಹಾನಿ ಹಾಗೂ ಗಾಯಗಳಾಗಿರುವ ಪ್ರಕರಣಗಳು ದಾಖಲಾಗಿವೆ.
ಎಸ್ ಡಿಪಿಐ ಮುಖಂಡ ಮೀರ್ ಅಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಸಾಧ್ಯವಿದೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ನಮ್ಮ ಜೀವ ಭದ್ರತೆಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.







