ರಾಯಚೂರು | ಅಕ್ರಮ ನೇಮಕಾತಿ ರದ್ದುಪಡಿಸದಿದ್ದರೆ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ : ಅಂಬಣ್ಣ ಆರೋಲಿಕರ್

ರಾಯಚೂರು: ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಿಯಮಗಳನ್ನು ಉಲ್ಲಂಘಿಸಿ 75 ಬೋಧಕೇತರ ಸಿಬ್ಬಂದಿಗಳ ನೇರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿರುವುದು ಸಂಪೂರ್ಣ ಅಕ್ರಮವಾಗಿದ್ದು, ಕುಲಪತಿ ಡಾ.ಹನುಮಂತಪ್ಪ ಅವರು ಒಳಒಪ್ಪಂದದ ಮೂಲಕ ನೇಮಕಾತಿಗೆ ಮುಂದಾಗಿದ್ದಾರೆ. ಈ ಅಕ್ರಮ ಅಧಿಸೂಚನೆಯನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲದಿದ್ದರೆ ಜನವರಿ ಮೊದಲ ವಾರದಲ್ಲಿ ವಿಶ್ವವಿದ್ಯಾಲಯಕ್ಕೆ ಬೀಗ ಹಾಕಿ ಮುತ್ತಿಗೆ ಹಾಕಲಾಗುವುದು ಎಂದು ಪರಿಶಿಷ್ಟ ಜಾತಿ ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಅಂಬಣ್ಣ ಆರೋಲಿಕರ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯ ನಿಯಮಗಳ ಪ್ರಕಾರ ಸಹ ಪ್ರಾಧ್ಯಾಪಕರ ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ನಡೆಸಬೇಕಾಗಿದ್ದರೂ, ಅದನ್ನು ಕಡೆಗಣಿಸಿ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಮೂಲಕ ಜ.17ರಿಂದ 20ರವರೆಗೆ ನೇಮಕಾತಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಆರೋಪಿಸಿದರು.
ವಿಶ್ವವಿದ್ಯಾಲಯ ನಿಗದಿಪಡಿಸಿದ ಪರೀಕ್ಷೆಗಳ ವಿರುದ್ಧ ವಿದ್ಯಾರ್ಥಿಗಳು ನ್ಯಾಯಾಲಯಕ್ಕೆ ಹೋಗಿರುವ ಕಾರಣ ಮೂರು ಬಾರಿ ಪರೀಕ್ಷೆಗಳನ್ನು ಮುಂದೂಡಬೇಕಾಯಿತು. ಇಂತಹ ಸಂದರ್ಭದಲ್ಲಿ ಮೂರು ತಿಂಗಳಲ್ಲಿ ನಿವೃತ್ತಿ ಹೊಂದಲಿರುವ ಕುಲಪತಿ ಡಾ. ಹನುಮಂತಪ್ಪ ಅವರು ಅಭ್ಯರ್ಥಿಗಳಿಂದ 40 ರಿಂದ 50 ಲಕ್ಷ ರೂಪಾಯಿ ವರೆಗೆ ಹಣ ವಸೂಲಿ ಮಾಡಿ ಕಾನೂನುಬಾಹಿರ ನೇಮಕಾತಿ ನಡೆಸಲು ಮುಂದಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
2023ರಿಂದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ನಿರಂತರವಾಗಿ ಅಕ್ರಮಗಳು ನಡೆಯುತ್ತಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾದ ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನವನ್ನು ಸಮರ್ಪಕವಾಗಿ ಬಳಸಿಲ್ಲ. ಐಸಿಎಆರ್‌ನಿಂದ ಎಸ್‌ಇಪಿ–ಟಿಎಸ್‌ಪಿ ಯೋಜನೆಯಡಿ ಬಿಡುಗಡೆಯಾದ 2 ಕೋಟಿ ರೂಪಾಯಿ ಅನುದಾನವನ್ನು ಪಾರದರ್ಶಕವಾಗಿ ಬಳಕೆ ಮಾಡಿಲ್ಲ ಎಂದು ಆರೋಪಿಸಿದರು.
ಪ್ರತಿ ಕೃಷಿ ವಿಜ್ಞಾನ ಕೇಂದ್ರದ ಘಟಕಕ್ಕೆ ಒಂದು ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದರೂ, ಯಾವುದೇ ಲೆಕ್ಕಪತ್ರವಿಲ್ಲದೆ ವೆಚ್ಚ ಮಾಡಲಾಗಿದೆ. ಎಐಸಿಆರ್‌ಪಿ ಯೋಜನೆಯಡಿ ಬಿಡುಗಡೆಯಾದ 18 ಯೋಜನೆಗಳ ಅನುದಾನದಲ್ಲಿಯೂ ಭಾರಿ ಭ್ರಷ್ಟಾಚಾರ ನಡೆದಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ವಿದೇಶಿ ಪ್ರವಾಸಕ್ಕೆ ಅನುದಾನವಿದ್ದರೂ, ಒಬ್ಬ ವಿದ್ಯಾರ್ಥಿಯನ್ನು ಮೂರ ಬಾರಿ ವಿದೇಶಕ್ಕೆ ಕಳುಹಿಸಲಾಗಿದೆ ಎಂದು ದೂರಿದರು.
ಗುತ್ತಿಗೆ ಆಧಾರಿತ ಹುದ್ದೆಗಳ ನೇಮಕಾತಿಯಲ್ಲಿಯೂ ಹಣ ವಸೂಲಿ ನಡೆಯುತ್ತಿದ್ದು, ಕಮಿಷನ್ ನೀಡಿದವರಿಗೆ ಮಾತ್ರ ಕೆಲಸ ಹಾಗೂ ಹುದ್ದೆ ನೀಡಲಾಗುತ್ತಿದೆ. ನ್ಯಾಯಾಲಯದ ಆದೇಶಗಳನ್ನು ಗಾಳಿಗೆ ತೂರಿ ನಿವೃತ್ತಿಗೆ ಮುನ್ನ ಹಣ ಸಂಪಾದನೆಗಾಗಿ ಆತುರದಿಂದ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಈ ಎಲ್ಲಾ ಅಕ್ರಮಗಳ ಬಗ್ಗೆ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ, ಕೃಷಿ ಇಲಾಖೆ ಸಚಿವರು ಹಾಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರು, ಕೃಷಿ ಸಚಿವರಿಗೆ ನಿಯೋಗ ತೆರಳಿ ದೂರು ಸಲ್ಲಿಸಲಾಗುವುದು. ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸಿ ಹೊಸ ಅಧಿಸೂಚನೆ ಹೊರಡಿಸದಿದ್ದರೆ ಜನವರಿ ಮೊದಲ ವಾರದಲ್ಲಿ ವಿಶ್ವವಿದ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಅಂಬಣ್ಣ ಆರೋಲಿಕರ್ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕೆ.ಪಿ. ಅನಿಲ್‌ಕುಮಾರ್, ಎಸ್. ರಾಜು, ಮಲ್ಲೇಶ, ರಾಘವೇಂದ್ರ ಬೋರೆಡ್ಡಿ ಉಪಸ್ಥಿತರಿದ್ದರು.







