Raichur | SIR ಕೈಬಿಟ್ಟು ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಲು ಒತ್ತಾಯಿಸಿ ಪ್ರತಿಭಟನೆ

ರಾಯಚೂರು : SIR ಪ್ರಕ್ರಿಯೆಯನ್ನು ರದ್ದುಗೊಳಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರನ್ನು ವಜಾಗೊಳಿಸಲು ಆಗ್ರಹಿಸಿ ಸಿಪಿಐ(ಎಂಎಲ್) ಲಿಬರೇಶನ್ ರಾಯಚೂರು ತಾಲೂಕು ಸಮಿತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು
ನಗರದ ಟಿಪ್ಪು ಸುಲ್ತಾನ್ ಉದ್ಯಾನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮುಖ್ಯ ಚುನಾವಣೆ ಆಯುಕ್ತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯ ಚುನಾವಣಾ ಆಯುಕ್ತರ ಕಚೇರಿಯು ತನ್ನ ಘನತೆಯನ್ನು ಕಳೆದುಕೊಂಡಿದೆ ಎಂಬುದಕ್ಕೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯೇ ಸಾಕ್ಷಿಯಾಗಿದೆ. ಆ ವರದಿಯಲ್ಲಿ ಮುಖ್ಯ ಚುನಾವಣೆ ಆಯುಕ್ತರಿಗೆ, ಇಬ್ಬರು ಆಯುಕ್ತರು ಲೋಪದೋಷಗಳ ಬಗ್ಗೆ 14 ಬಾರಿ ಪತ್ರ ಬರೆದು ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೆ ಸ್ಪಂದಿಸದೇ ಏಕ ಪಕ್ಷೀಯವಾಗಿ, ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಇದು ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸಿದರು
ಎಸ್ ಐ ಆರ್ ಅನ್ನು ವಿರೋಧ ಪಕ್ಷಗಳ ನಾಯಕರು, ಪ್ರಗತಿಪರ ಸಂಘಟಕರು, ಹೋರಾಟಗಾರರು ವಿರೋಧಿಸಿದರೂ ಕಿವಿಗೊಡದೇ ನಿಷ್ಪಕ್ಷಪಾತವಾಗಿ ಎಸ್ಐಆರ್ ಮಾಡುವುದಾಗಿ ಭರವಸೆ ನೀಡುತ್ತಲೇ ಕೋಟ್ಯಾಂತರ ಮತದಾರರ ಹೆಸರು ತೆಗೆದುಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ತಾಲೂಕ ಕಾರ್ಯದರ್ಶಿ ಅಜೀಜ್ ಜಾಗೀರ್ದಾರ್, ಮುಖಂಡರಾದ ಭೀಮಯ್ಯ, ಖಾದರ್ ಅಹ್ಮದ್, ನಿಸಾರ್, ಜಗದೀಶ್, ಮಹೇಂದ್ರ, ಹನೀಫ್ ಅಬಕಾರಿ, ಎಲ್ಲಪ್ಪ, ವೀರೇಶ್, ಸಣ್ಣ ನರಸಪ್ಪ, ಮಾರಣ್ಣ ಇದ್ದರು.




