Raichur | ಎಸ್‌ಐಆರ್ ಮತದಾರರ ಪಟ್ಟಿಯನ್ನು ಪಾರದರ್ಶಕಗೊಳಿಸುವ ಉದ್ದೇಶ ಹೊಂದಿದೆ: ಡಿಸಿ ಪೂವಿತಾ ಎಸ್.

ರಾಯಚೂರು : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ವಿಶೇಷ ತೀವ್ರ ಪರಿಷ್ಕರಣೆ–2026 (ಎಸ್‌ಐಆರ್) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮತದಾರರ ಪಟ್ಟಿಯನ್ನು ಇನ್ನಷ್ಟು ನಿಖರ, ದೋಷರಹಿತ ಹಾಗೂ ಪಾರದರ್ಶಕಗೊಳಿಸುವ ಉದ್ದೇಶ ಹೊಂದಿದೆ ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ತಿಳಿಸಿದ್ದಾರೆ.
ನಗರದ ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆಯ ಭಾಗವಾಗಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಸಂಗ್ರಹಿಸಿ ಪರಿಶೀಲಿಸಲಿದ್ದಾರೆ. ಈ ಮಾಹಿತಿಯ ಆಧಾರದ ಮೇಲೆ ಮತದಾರರ ಪಟ್ಟಿಯ ತಿದ್ದುಪಡಿ ಹಾಗೂ ನವೀಕರಣ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜೂನ್ 20ರಿಂದ 29ರವರೆಗೆ ಪೂರ್ವಸಿದ್ಧತೆ, ತರಬೇತಿ ಹಾಗೂ ಮುದ್ರಣ ಕಾರ್ಯಗಳು ನಡೆಯಲಿದ್ದು, ಜೂನ್ 30ರಿಂದ ಜುಲೈ 29ರವರೆಗೆ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತದೆ. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.
ಶೇ.85.90 ಮತದಾರರ ಮ್ಯಾಪಿಂಗ್ ಪೂರ್ಣ :
ಜಿಲ್ಲೆಯ 2025ರ ಮತದಾರರ ಪಟ್ಟಿಯ ಪ್ರಕಾರ ಒಟ್ಟು 17,22,279 ಮತದಾರರಿದ್ದು, ಈಗಾಗಲೇ 14,78,141 ಮತದಾರರನ್ನು ಗುರುತಿಸಿ ಶೇ.85.90ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ಉಳಿದ ಮತದಾರರ ಪತ್ತೆ ಕಾರ್ಯ ಮುಂದುವರಿದಿದ್ದು, ಯಾರ ಹೆಸರನ್ನೂ ಪರಿಶೀಲನೆ ಇಲ್ಲದೆ ಮತದಾರರ ಪಟ್ಟಿಯಿಂದ ಕೈಬಿಡುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಗಣತಿ ನಮೂನೆ ಭರ್ತಿ ಕಡ್ಡಾಯ :
ಮುಂದಿನ ಹಂತದಲ್ಲಿ ಮತದಾರರ ಮನೆಗಳಿಗೆ ಬಿಎಲ್‌ಒಗಳು ಅರ್ಧ ಭರ್ತಿಯಾದ ಗಣತಿ ನಮೂನೆಗಳನ್ನು ತಲುಪಿಸಲಿದ್ದಾರೆ. ಮತದಾರರು ಮಾಹಿತಿಯನ್ನು ಪರಿಶೀಲಿಸಿ, ಅಗತ್ಯ ತಿದ್ದುಪಡಿ ಮಾಡಿ ಸಹಿಯೊಂದಿಗೆ ನಮೂನೆಯನ್ನು ಹಿಂತಿರುಗಿಸಬೇಕು. ಬಿಎಲ್‌ಒಗಳು ಕನಿಷ್ಠ ಮೂರು ಬಾರಿ ಮನೆಗಳಿಗೆ ಭೇಟಿ ನೀಡಲಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು.
1,853 ಮತಗಟ್ಟೆಗಳು :
ಪ್ರಸ್ತುತ ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,853 ಮತಗಟ್ಟೆಗಳಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಪ್ರಜಾಪ್ರಭುತ್ವದ ಪ್ರಮುಖ ಪ್ರಕ್ರಿಯೆಯಾಗಿದೆ. ಯಾವುದೇ ಮಾಹಿತಿ ಅಥವಾ ದೂರುಗಳಿಗಾಗಿ ಸಾರ್ವಜನಿಕರು ಚುನಾವಣಾ ಆಯೋಗದ 1950 ಸಹಾಯವಾಣಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತದಾರರ ಪಟ್ಟಿ ಸಂಪೂರ್ಣ, ನಿಖರ ಹಾಗೂ ಪಾರದರ್ಶಕವಾಗಲು ಸಾರ್ವಜನಿಕರು, ರಾಜಕೀಯ ಪಕ್ಷಗಳು ಹಾಗೂ ಮತದಾರರು ಬಿಎಲ್‌ಒಗಳಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ರಾಯಚೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಜಿ.ಸುರೇಶ ಸೇರಿದಂತೆ ಚುನಾವಣಾ ಶಾಖೆಯ ಶಿರಸ್ತೇದಾರ್ ಋಷಿಕೇಶ ಇತರರು ಉಪಸ್ಥಿತರಿದ್ದರು.






