Raichur | ಕ್ರೀಡೆ ದೈಹಿಕ ಆರೋಗ್ಯ, ಶಿಸ್ತು, ಆತ್ಮವಿಶ್ವಾಸ ಬೆಳೆಸುವ ಸಾಧನ : ಜಿ.ಹರೀಶ್
ಗೃಹ ರಕ್ಷಕರ ವಾರ್ಷಿಕ ಕ್ರೀಡಾಕೂಟ-2026

ರಾಯಚೂರು: ಕ್ರೀಡೆ ಎನ್ನುವುದು ಕೇವಲ ಗೆಲುವು ಮತ್ತು ಸೋಲಿನ ವಿಚಾರವಲ್ಲ. ದೈಹಿಕ ಆರೋಗ್ಯ, ಮಾನಸಿಕ ಸದೃಢತೆ, ಶಿಸ್ತು, ಸಮಯಪಾಲನೆ, ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಅತ್ಯುತ್ತಮ ಸಾಧನವಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಹರೀಶ್ ಹೇಳಿದರು.
ಅಕ್ಟೋಬರ್ 8ರಂದು ಗುರುವಾರ ರಾಯಚೂರು ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಗೃಹರಕ್ಷಕರ ವಾರ್ಷಿಕ ವೃತ್ತಿಪರ ಹಾಗೂ ಕ್ರೀಡಾಕೂಟ–2026ರ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೈದಾನದಲ್ಲಿ ನಾವು ಗೆಲ್ಲುವುದಕ್ಕಿಂತ ಮೊದಲು ನಮ್ಮ ಸೋಮಾರಿತನವನ್ನು ಗೆಲ್ಲಬೇಕು. ಪ್ರತಿದಿನದ ಅಭ್ಯಾಸ, ಪರಿಶ್ರಮ ಮತ್ತು ಶಿಸ್ತಿನಿಂದ ಮಾತ್ರ ಉತ್ತಮ ಕ್ರೀಡಾಪಟುವಾಗಲು ಸಾಧ್ಯ. ಕ್ರೀಡೆಯು ತಂಡದ ಮನೋಭಾವವನ್ನು ಕಲಿಸುತ್ತದೆ. ಒಬ್ಬರ ಯಶಸ್ಸಿಗೆ ಮತ್ತೊಬ್ಬರು ಸಹಕಾರ ನೀಡುವುದು, ಎದುರಾಳಿಯನ್ನು ಗೌರವಿಸುವುದು ಹಾಗೂ ಗೆಲುವನ್ನು ವಿನಯದಿಂದ ಸ್ವೀಕರಿಸುವುದು ಕ್ರೀಡೆಯಿಂದ ಕಲಿಯುವ ಅಮೂಲ್ಯ ಜೀವನ ಪಾಠಗಳಾಗಿವೆ ಎಂದರು.
ಈ ವೇಳೆ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟೆ ದೀಪಾ ಗೋಡೆಪಾಡ್ ಎಸ್.ಎ. ಅವರು ವಿಜೇತ ಗೃಹರಕ್ಷಕರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಕಾರಾತ್ಮಕ ಆಲೋಚನೆ ಮತ್ತು ಪರಿಶ್ರಮ ಅಗತ್ಯ. ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರು ಮುಂದಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಗೃಹರಕ್ಷಕರಿಗೆ ಶುಭ ಹಾರೈಸಿದರು.
ವಿವಿಧ ಕ್ರೀಡೆಗಳ ಆಯೋಜನೆ :
ರಾಯಚೂರು ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಸ್ಕ್ವಾಡ್ ಡ್ರಿಲ್, ಪ್ರಥಮ ಚಿಕಿತ್ಸೆ, ವಾಲಿಬಾಲ್, ಕಬಡ್ಡಿ, ರೈಫಲ್ ಡ್ರಿಲ್, ಹೈಜಂಪ್, ಲಾಂಗ್ ಜಂಪ್, ಗುಂಡು ಎಸೆತ, ಹಗ್ಗ ಜಗ್ಗಾಟ, 100 ಮೀಟರ್ ಓಟ, 800 ಮೀಟರ್ ಓಟ ಹಾಗೂ 4×100 ಮೀಟರ್ ರಿಲೇ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಇಲಾಖೆಯ ಸಿಬ್ಬಂದಿ ಆಸಕ್ತಿಯಿಂದ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಾಯಕ ಬೋಧಕ ಬಸವರಾಜ ಶಿದ್ರಾಹುತಾರ್, ಗೃಹರಕ್ಷಕ ಅಧಿಕಾರಿಗಳಾದ ನಿಂಬನಗೌಡ, ತಿಮ್ಮನಗೌಡ, ವರದರಾಜ ಕೆ., ಚನ್ನಪ್ಪಗೌಡ, ವೀರಭದ್ರಪ್ಪ, ಮಲ್ಲಪ್ಪ, ಎನ್‌ಸಿಒ ಬಸವಂತ ಸಿಂಗ್, ಎನ್. ತಿಮ್ಮಪ್ಪ, ಶಿವಪ್ಪ, ಎಂ. ಚಂದ್ರಶೇಖರ್, ಶಾಂತಪ್ಪ ಹಾಗೂ ವಾಹನ ಚಾಲಕ ಮಂಜುನಾಥ ದೇಸಾಯಿ ಸೇರಿದಂತೆ ವಿವಿಧ ತಾಲ್ಲೂಕು ಘಟಕಗಳ ಗೃಹರಕ್ಷಕರು ಮತ್ತು ಗೃಹರಕ್ಷಕಿಯರು ಉಪಸ್ಥಿತರಿದ್ದರು.






