ರಾಯಚೂರು | ಬೀದಿ ನಾಯಿಗಳ ದಾಳಿ : 15ಕ್ಕೂ ಹೆಚ್ಚು ಜನರಿಗೆ ಗಾಯ, ಆಸ್ಪತ್ರೆಗೆ ದಾಖಲು

ರಾಯಚೂರು : ಬೀದಿ ನಾಯಿಗಳ ಹಿಂಡು ಸಾರ್ವಜನಿಕರ ಮೇಲೆ ಏಕಾಏಕಿ ನಡೆಸಿದ ದಾಳಿಯಿಂದಾಗಿ 15ಕ್ಕೂ ಹೆಚ್ಚು ಮಂದಿ ಗಾಯ ಗಾಯಗೊಂಡಿರುವ ಘಟನೆ ನಗರದ ಗಂಗಾ ನೀವಾಸದ ಮಾವಿನಕೆರೆ ಬಳಿಯ ಟ್ಯಾಂಕ್ ಬಂಡ್ ಹತ್ತಿರ ನಡೆದಿದೆ.
ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿವೆ. ಗಾಯಗೊಂಡವರನ್ನು ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಇಬ್ಬರು ಮಕ್ಕಳು ತೀವ್ರಗಾಯಗೊಂಡಿದ್ದಾರೆ ಎನ್ನಲಾಗಿದೆ.
ಗಾಯಗೊಂಡವರನ್ನು ಲಿಂಗಪ್ಪ, ಶರಣಪ್ಪ, ರಮೇಶ್, ಮುಹಮದ್ ಗೌಸ್,ಮುಹಮ್ಮದ್ ಅಮ್ಮದ್, ಶಂಶುದ್ದೀನ್, ನವೀದ್, ಖಲೀಮುದ್ದಿನ್, ಫರ್ಝಾನ್ ಬೇಗಂ, ಮುಹಮದ್ ಆರೀಫ್ ಎಂದು ಹೇಳಲಾಗಿದೆ.
ನಗರದಲ್ಲಿ ಬೀದಿ ನಾಯಿಗಳು ಹಾವಲಿ ಹೆಚ್ಚಿದ್ದು, ಜನರು ಬೇಸತ್ತು ಹೋಗಿದ್ದಾರೆ. ಈ ಹಿಂದೆಯೂ ಬೀದಿ ನಾಯಿಗಳು ದಾಳಿ ನಡೆಸಿದಾಗ ಮಹಾನಗರ ಪಾಲಿಕೆಯು ಆ ಸಮಯಕ್ಕೆ ಎಚ್ಚೆತ್ತುಕೊಂಡು ಬೇಕಾ ಬಿಟ್ಟಿ ಎಂಬಂತೆ ಹತ್ತಾರು ನಾಯಿಗಳು ಹಿಡಿದು ಸಮಾಧಾನ ಪಡಿಸುವ ಕೆಲಸ ಮಾಡಿತ್ತು, ಆದರೆ ಶಾಶ್ವತ ಪರಿಹಾರ ಮಾತ್ರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದಿ ನಾಯಿಗಳನ್ನು ಹಿಡಿದು ಲಸಿಕೆ ನೀಡಿ ಬಿಡುತ್ತಿದ್ದಾರೆ. ಬೀದಿನಾಯಿಗಳನ್ನು ಹಿಡಿದು ಅವುಗಳನ್ನು ದೂರದ ಪ್ರದೇಶದಲ್ಲಿ ಬಿಡುವ ಕೆಲಸ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.