Raichur | ಪಟಾಕಿ ಮಳಿಗೆಗಳಲ್ಲಿ ಅಪ್ರಾಪ್ತ ಮಕ್ಕಳನ್ನು ಕೆಲಸಕ್ಕೆ ಬಳಸಿದರೆ ಕಠಿಣ ಕ್ರಮ : ಆರತಿ

ಸಾಂದರ್ಭಿಕ ಚಿತ್ರ | Photo credit : AI
ರಾಯಚೂರು: ದೀಪಾವಳಿ ಹಬ್ಬದ ಪ್ರಯುಕ್ತ ರಾಯಚೂರು ಜಿಲ್ಲೆ ಹಾಗೂ ವಿವಿಧ ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗುವ ಪಟಾಕಿ ಮಾರಾಟ ಮಳಿಗೆಗಳಲ್ಲಿ ಪಟಾಕಿ ತಯಾರಿಕೆ, ಮಾರಾಟ ಹಾಗೂ ಇತರ ಯಾವುದೇ ಪ್ರಕ್ರಿಯೆಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ರಾಯಚೂರು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಹಾಗೂ ಕಾರ್ಮಿಕ ಅಧಿಕಾರಿ ಆರತಿ ತಿಳಿಸಿದ್ದಾರೆ.
ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಮತ್ತು ತಿದ್ದುಪಡಿ ಕಾಯ್ದೆ 2016ರ ಪ್ರಕಾರ, 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ, 18 ವರ್ಷದೊಳಗಿನ ಕಿಶೋರರನ್ನು ಪಟಾಕಿ ತಯಾರಿಕೆ ಮತ್ತು ಮಾರಾಟ ಸೇರಿದಂತೆ ಯಾವುದೇ ರೀತಿಯ ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿದೆ.
ಜಿಲ್ಲೆಯ ಯಾವುದೇ ಪಟಾಕಿ ಮಾರಾಟ ಮಳಿಗೆಗಳು ಅಥವಾ ತಯಾರಿಕಾ ಘಟಕಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡಿರುವುದು ಕಂಡುಬಂದಲ್ಲಿ, ಸಂಬಂಧಪಟ್ಟ ಮಾಲೀಕರ ವಿರುದ್ಧ ಬಾಲಕಾರ್ಮಿಕ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.




