ರಾಯಚೂರು | ಹದಗೆಟ್ಟ ರಸ್ತೆ ದುರಸ್ತಿಗೊಳಿಸಲು ವಿದ್ಯಾರ್ಥಿಗಳಿಂದ ಶಾಸಕರಿಗೆ ಮನವಿ

ರಾಯಚೂರು : ತಾಲೂಕಿನ ಜೇಗರ್ಕಲ್, ಮೀರಾಪೂರ ಗ್ರಾಮಕ್ಕೆ ಹೋಗುವ ರಸ್ತೆ ತೀರಾ ಹದಗಟ್ಟಿದ್ದು, ಕೂಡಲೇ ರಸ್ತೆ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ ಮೀರಾಪೂರ ಶಾಲೆಯ ವಿದ್ಯಾರ್ಥಿಗಳಿಂದ ಇಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಯಚೂರು ತಾಲೂಕಿನ ಮೀರಾಪುರ ಗ್ರಾಮದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದರಿಂದ ಗ್ರಾಮಕ್ಕೆ ಸರಿಯಾದ ವೇಳೆಗೆ ಬಸ್ ಬರುತ್ತಿಲ್ಲ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದ್ದು, ತರಗತಿಗೆ ನಿಗದಿತ ವೇಳೆಗೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಶಾಸಕರ ಮುಂದೆ ಮಕ್ಕಳು ಅಳಲು ತೋಡಿಕೊಂಡರು.
ಹದಗೆಟ್ಟ ರಸ್ತೆಯಲ್ಲಿ ಸಂಚಾರ ಮಾಡುವುದು ದುಸ್ತರವಾಗಿದೆ. ಅನೇಕ ಅಪಘಾತ ಸಂಭವಿಸಿವೆ. ಇತ್ತೀಚೆಗೆ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ತೆರಳುವ ಸಂದರ್ಭದಲ್ಲಿ ಪೂರ್ತಿ ಹದೆಗೆಟ್ಟ ರಸ್ತೆಯಿಂದ ಮಗು ಗರ್ಭದಲ್ಲಿಯೇ ಸಾವನಪ್ಪಿದ್ದು, ಟ್ರಾಕ್ಟರ್ ಗಳು ಜಮೀನುಗಳಿಗೆ ಉರುಳಿ ಬಿದ್ದ ಘಟನೆಗಳು ನಡೆದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ದುರಸ್ತಿಗೊಳಿಸಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಕಾಶಪ್ಪ, ನಾಗರಾಜ್, ಭರತ್, ನಿರ್ಮಲಾ, ಮಹಾದೇವಮ್ಮ, ಮಹೇಶ, ಮೇಘನಾ, ಮಹಾಲಕ್ಷ್ಮೀ ಭವಾನಿ, ಅನಿಷಾ, ಅನಿತಾ ಇದ್ದರು.







