ರಾಯಚೂರು | ಅತಿಥಿ ಉಪನ್ಯಾಸಕರ ನೇಮಕಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ತರಗತಿ ಬಹಷ್ಕರಿಸಿ ಪ್ರತಿಭಟನೆ

ರಾಯಚೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ತಕ್ಷಣವೇ ನೇಮಕ ಮಾಡಲು ಆಗ್ರಹಿಸಿ, ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಶನಿವಾರ ಸರ್ಕಾರಿ ಪದವಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ನಗರದ ಸರ್ಕಾರಿ ಮಹಿಳಾ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಎಲ್ಲಾ ತರಗತಿಗಳನ್ನು ಬಹಿಷ್ಕರಿಸಿ ಹೋರಾಟದಲ್ಲಿ ಪಾಲ್ಗೊಂಡರು.
ಸಂಘಟನೆಯ ಜಿಲ್ಲಾಧ್ಯಕ್ಷ ಹಯ್ಯಾಳಪ್ಪ ಮಾತನಾಡಿ, “ಸರ್ಕಾರಿ ಕಾಲೇಜುಗಳಲ್ಲಿ ತರಗತಿ ನಡೆಯದೆ ವಿದ್ಯಾರ್ಥಿಗಳು ಹಿನ್ನಡೆ ಅನುಭವಿಸುತ್ತಿರುವಾಗ, ಖಾಸಗಿ ಕಾಲೇಜುಗಳು ಈಗಾಗಲೇ ಎರಡು ಘಟಕ ಪರೀಕ್ಷೆಗಳನ್ನು ಮುಗಿಸಿ ಸೆಮಿಸ್ಟರ್ ಸಿದ್ಧತೆಯಲ್ಲಿ ತೊಡಗಿವೆ. ಹೀಗಾದರೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ಪೈಪೋಟಿ ಹೇಗೆ ನೀಡುತ್ತಾರೆ?” ಎಂದು ಪ್ರಶ್ನಿಸಿದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕಲ್ಯಾಣ ಕುಮಾರ್ ಮಾತನಾಡಿ, “ಅತಿಥಿ ಉಪನ್ಯಾಸಕರಿಲ್ಲದೆ ತರಗತಿಗಳು ನಿಂತಿರುವಾಗಲೂ ವಿವಿಗಳು ಸೆಮಿಸ್ಟರ್ ಪರೀಕ್ಷಾ ವೇಳಾಪಟ್ಟಿ ಹಾಗೂ ಶುಲ್ಕದ ಸುತ್ತೋಲೆ ಹೊರಡಿಸಿರುವುದು ಖಂಡನೀಯ. ತರಗತಿ ಇಲ್ಲದೆ ಪರೀಕ್ಷೆ ಬೇಡ ಎಂಬ ಘೋಷಣೆೊಂದಿಗೆ ಹೋರಾಟ ಮುಂದುವರಿಯಲಿದೆ,” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಬಸವರಾಜ್, ವಿದ್ಯಾರ್ಥಿ ನಾಯಕರು ಪ್ರಶಾಂತ್, ಜಯಶ್ರೀ ಸೇರಿದಂತೆ ನೂರಾರು ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.







