ರಾಯಚೂರು | ಬಿಲ್ ಪಾವತಿಸದ ಆರೋಪ: ಮಾನಪ್ಪ ವಜ್ಜಲ್ ವಿರುದ್ಧ ಉಪಗುತ್ತಿಗೆದಾರರ ಧರಣಿ

ರಾಯಚೂರು : ಬಿಲ್ ಪಾವತಿ ಮಾಡದಿರುವುದಕ್ಕೆ ಆಕ್ರೋಶಗೊಂಡು, ಸಣ್ಣ ಗುತ್ತಿಗೆದಾರರು ದೇವದುರ್ಗ ಘಟಕದ ಎನ್‌ಡಿ ವಡ್ಡರ್ ಕಂಪನಿ ಮಾಲಕರಾದ ಶಾಸಕ ಮಾನಪ್ಪ ವಜ್ಜಲ್ ಅವರ ವಿರುದ್ಧ ಲಿಂಗಸೂಗೂರು ಪಟ್ಟಣದ ಸಹಾಯಕ ಆಯುಕ್ತರ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಉಪಗುತ್ತಿಗೆದಾರರು ಕಳೆದ ಏಳು ತಿಂಗಳಿಂದ ಬಿಲ್ ಪಡೆಯದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು. “ಹತ್ತಾರು ಬಾರಿ ಶಾಸಕ ಮಾನಪ್ಪ ವಜ್ಜಲ್ ಹಾಗೂ ಅವರ ಸಹೋದರ ಕರಿಯಪ್ಪ ವಜ್ಜಲ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರಕಿಲ್ಲ. ಬಿಲ್ ಪಾವತಿಸದೇ ಸುಳ್ಳು ಹೇಳುತ್ತಾ ವಿಳಂಬ ಮಾಡುತ್ತಿದ್ದಾರೆ,” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಧರಣಿ ಉದ್ದೇಶಿಸಿ ಮಾತನಾಡಿದ ಶರಣೇಗೌಡ ಸುಂಕೇಶ್ವರಹಾಳ ಅವರು, ದೇವದುರ್ಗ-ನಾರಾಯಣಪುರ ಬಲದಂಡೆ ಕಾಲುವೆ ಜೀರ್ಣೋದ್ಧಾರ ಹಾಗೂ ದುರಸ್ತಿ ಕಾಮಗಾರಿಗೆ ಒಟ್ಟು 1,466 ಕೋಟಿ ರೂ. ಮೊತ್ತದ ಗುತ್ತಿಗೆ ಎನ್‌ಡಿ ವಡ್ಡರ್ ಕಂಪನಿಗೆ ದೊರೆತಿದೆ. ಅದರ ಎರಡನೇ ಪ್ಯಾಕೇಜ್‌ನಡಿ ನಾವು ಉಪಗುತ್ತಿಗೆ ಪಡೆದಿದ್ದೇವೆ. 4.87 ಕೋಟಿ ರೂ. ಮೊತ್ತದ 13.5 ಕಿ.ಮೀ ಕಾಮಗಾರಿಯನ್ನು ಮುಗಿಸಿ ಇಲಾಖೆಯಿಂದ ಪ್ರಮಾಣಪತ್ರವನ್ನು ಪಡೆದಿದ್ದರೂ ಕಂಪನಿ ಬಿಲ್ ನೀಡಿಲ್ಲ,” ಎಂದರು.
ಉಪಗುತ್ತಿಗೆ ಒಪ್ಪಂದದ ಪ್ರಕಾರ ಕಾಮಗಾರಿ ಮುಗಿದ 10 ದಿನಗಳಲ್ಲಿ ಬಿಲ್ ಪಾವತಿ ಮಾಡಬೇಕಾಗಿತ್ತು. ಆದರೆ ಈಗ ಒಂದು ವರ್ಷ ಆರು ತಿಂಗಳು ಕಳೆದರೂ ಪಾವತಿ ಆಗಿಲ್ಲ ಎಂದು ಅವರು ದೂರಿದರು.
“ಸರ್ಕಾರ ಈಗಾಗಲೇ ಎನ್‌ಡಿ ವಡ್ಡರ್ ಕಂಪನಿಗೆ 375.3 ಕೋಟಿ ರೂ. ಪಾವತಿಸಿದೆ. ಆದರೂ ನಮ್ಮ ಬಿಲ್ ಕೊಡದೆ ಸುಳ್ಳು ಹೇಳುತ್ತಿದ್ದಾರೆ. ಮಾನಪ್ಪ ವಜ್ಜಲ್ ಶಾಸಕರಾಗಿರಲು ಅರ್ಹರಲ್ಲ. ಅವರಿಗೆ ಮಾನ-ಮರ್ಯಾದೆ ಇದ್ದರೆ ಕೂಡಲೇ ಬಿಲ್ ಪಾವತಿ ಮಾಡಬೇಕು, ಇಲ್ಲದಿದ್ದರೆ ನಮ್ಮ ಪ್ರಾಣ ಬಿಟ್ಟರೂ ಧರಣಿ ಮುಂದುವರಿಸುತ್ತೇವೆ,” ಎಂದು ಉಪಗುತ್ತಿಗೆದಾರರು ಎಚ್ಚರಿಕೆ ನೀಡಿದರು.
ಧರಣಿಯಲ್ಲಿ ಗುತ್ತಿಗೆದಾರರಾದ ತುಕರಾಮ್, ಅಂಜಿನಯ್ಯ ಬಡಿಗೇರ, ಪರಮಾನಂದ ಸುಂಕೇಶ್ವರಹಾಳ, ವಿರೇಶ ಹುನಗಂದ್, ಶಿವಕುಮಾರ ಸಾಹುಕಾರ, ಅಮರೇಶ ಇಟಗಿ, ರಂಗಪ್ಪ ಮುಸ್ಠೂರು, ಆದೇಶ ನಗನೂರು, ಚಿದಾನಂದ ಕಸಬಾಲಿಂಗಸುಗೂರು, ಬಸವರಾಜ ಬಡಿಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.







