Raichur | ಗಣೇಶ ವಿಸರ್ಜನೆಗೆ ಅಗತ್ಯ ಕ್ರಮವಹಿಸಿ : ಡಿಸಿ ಪೂವಿತಾ ಎಸ್.
ಗಣೇಶ ವಿಸರ್ಜನೆಗೆ ಜಿಲ್ಲಾಡಳಿತ ಸಜ್ಜು; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ

ರಾಯಚೂರು: ಮುಂಬರುವ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ವಿಸರ್ಜನೆ ಶಾಂತಿಯುತ ಹಾಗೂ ಸುರಕ್ಷಿತವಾಗಿ ನಡೆಯಲು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಗತ್ಯ ಪೂರ್ವಸಿದ್ಧತೆ ಕೈಗೊಂಡಿವೆ. ಈ ಸಂಬಂಧ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿ, ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡುವಂತೆ ಸೂಚಿಸಿದರು.
ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ವಿಸರ್ಜನೆ ಮೆರವಣಿಗೆಗಳ ವೇಳೆ ಕ್ರೇನ್‌ಗಳು, ವಾಹನಗಳ ಸಂಚಾರ ಮತ್ತು ಭದ್ರತಾ ವ್ಯವಸ್ಥೆಯನ್ನು ಪೊಲೀಸ್, ಸಂಚಾರ ಹಾಗೂ ಆರ್‌ಟಿಒ ಇಲಾಖೆ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಮಹಾನಗರ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆ ವಿಸರ್ಜನಾ ಮಾರ್ಗಗಳ ರಸ್ತೆ ದುರಸ್ತಿ ಹಾಗೂ ಪ್ಯಾಚಿಂಗ್ ಕಾಮಗಾರಿ ಪೂರ್ಣಗೊಳಿಸಬೇಕು. ಆರೋಗ್ಯ ಇಲಾಖೆ ಅಗತ್ಯ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು. ಜೆಸ್ಕಾಂ ನಿರಂತರ ವಿದ್ಯುತ್ ಪೂರೈಕೆ ಖಚಿತಪಡಿಸಬೇಕು. ಅಗ್ನಿಶಾಮಕ ಇಲಾಖೆ ವಿಸರ್ಜನಾ ಸ್ಥಳಗಳಲ್ಲಿ ತಜ್ಞ ಈಜುಗಾರರನ್ನು ನಿಯೋಜಿಸಬೇಕು ಎಂದು ಸೂಚಿಸಲಾಯಿತು.
ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹೋಪಾತ್ರ ಮಾತನಾಡಿ, ದಾರುಲ್ಭಾವಿ ಮತ್ತು ಖಾಸಾಭಾವಿ ವಿಸರ್ಜನಾ ಸ್ಥಳಗಳನ್ನು ಸ್ವಚ್ಛ ಹಾಗೂ ಸುರಕ್ಷಿತವಾಗಿಸಲು ಕ್ರಮ ಕೈಗೊಳ್ಳಲಾಗಿದೆ. ವಿಸರ್ಜನಾ ಮೆರವಣಿಗೆಗಳಿಗೆ ಮುಕ್ತ ಸಂಚಾರ, ಸಿಸಿಟಿವಿ, ಬ್ಯಾರಿಕೇಡ್, ಬೆಳಕು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಘು ಗಿರಿ, ಹೆಚ್ಚುವರಿ ಎಸ್‌ಪಿ ಹರೀಶ್ ಜಿ., ಡಿವೈಎಸ್‌ಪಿ ಶಾಂತಮೂರ್ತಿ, ಅಗ್ನಿಶಾಮಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.






