ರಾಯಚೂರು | ಅಲ್ಪಸಂಖ್ಯಾತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಪ್ರತಿಭಾ ಪುರಸ್ಕಾರ ಪ್ರದಾನ

ರಾಯಚೂರು: ಮಹಾತ್ಮಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ 15ರಂದು ನಡೆದ ಸ್ವಾತಂತ್ರೋತ್ಸವ ಸಮಾರಂಭದಲ್ಲಿ, ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ಅಲ್ಪಸಂಖ್ಯಾತರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೌಲಾನ ಅಬುಲ್ ಕಲಾಂ ಆಜಾದ್ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.
ಇಲ್ಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2024-25ನೇ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಮೊದಲ ಪ್ರಯತ್ನದಲ್ಲಿಯೇ ಶೇ.90ಕ್ಕಿಂತ ಹೆಚ್ಚು ಅಂಕಗಳಿಸಿದ ಅಗ್ರ ಶ್ರೇಣಿಯ ಅಲ್ಪಸಂಖ್ಯಾತರ ಸಮುದಾಯದ ಪ್ರತಿಭಾವಂತ ಎಸೆಸೆಲ್ಸಿ ವಿದ್ಯಾರ್ಥಿಗಳಾದ ರಾಯಚೂರು ಸಫೀಯಾ ಪ್ರೌಢಶಾಲೆಯ ವಿದ್ಯಾರ್ಥಿನಿ ಮೈಶಾ ತಂದೆ ಮನ್ಸೂರ್ ಶೇಖ್ ಶೇ.99.36, ರಾಯಚೂರಿನ ಸೇಂಟ್ ಮೇರಿ ಕಾನ್ವೆಂಟ್ ಪ್ರೌಢಶಾಲೆಯ ವಿದ್ಯಾರ್ಥಿನಿ ಮೀಸಂ ಘಾಜಿ ಶೇ.99.30, ಲಿಂಗಸುಗೂರಿನ ಲಿಟಲ್ ಏಂಜಲ್ಸ್ ಪ್ರೌಢಶಾಲೆಯ ವಿದ್ಯಾರ್ಥಿ ಉಮರ್ ಫಾರೂಕ್ ತಂದೆ ಖಾಜಾಹುಸೇನ್ ಶೇ.96.8, ಗಿಲ್ಲೆಸುಗೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಗೌಶಿಯ ಬೇಗಂ ತಂದೆ ಸೈಯದ್ ಫಾರೂಕ್ ಶೇ. 95.52ರಷ್ಟು ಅಂಕಗಳನ್ನು ಗಳಿಸಿ ಮೌಲಾನ ಅಬುಲ್ ಕಲಾಂ ಆಜಾದ್ ಪ್ರತಿಭಾ ಪುರಸ್ಕಾರ ಪಡೆದುಕೊಂಡರು.
ಪಿಯುಸಿ ವಿಭಾಗದಲ್ಲಿ: ದ್ವಿತೀಯ ಪಿ.ಯು.ಸಿ 11 ವಿದ್ಯಾರ್ಥಿಗಳ ಪೈಕಿ ಮಾನ್ವಿ ಸರ್ವೋದಯ ಪಿಯುಸಿ ಕಾಲೇಜಿನ ವಿದ್ಯಾರ್ಥಿ ಕಾಶಿಫಾ ತಜರೀನ್ ತಂದೆ ಮೀರ್ ಲಿಯಾಕತ್ ಶೇ.98.67, ರಾಯಚೂರಿನ ಪೂರ್ಣಿಮಾ ಪಿಯು ಕಾಲೇಜ್ ವಿದ್ಯಾರ್ಥಿ ಎಂಡಿ ಮುಬಶೀರ್ ಅಲಿ ತಂದೆ ಎಂ ಜುನೇದ್ ಅವರಿಗೆ ಸಹ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಅನೇಕ ಗಣ್ಯ ಮಹನಿಯರು ಇದ್ದರು.





