ರಾಯಚೂರು | ಪುಟ್‌ಪಾತ್ ತೆರವು ಕಾರ್ಯಾಚರಣೆಯಲ್ಲಿ ತಾಲೂಕು ಆಡಳಿತ ವಿಫಲ : ಕರವೇ ಆರೋಪ

ಸಿರವಾರ : ತಾಲೂಕು ಆಡಳಿತದ ಅಧಿಕಾರಿಗಳು ಮುಂದಿನ 10 ದಿನಗಳಲ್ಲಿ ಸಿರವಾರ ನಗರವನ್ನು ಧೂಳು ಮುಕ್ತಗೊಳಿಸದಿದ್ದರೆ, ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಸಮಿತಿ ವತಿಯಿಂದ ಡಿ.2ರಂದು ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಅರೆಬೆತ್ತಲೆ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಖಾಜನಗೌಡ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ)ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಮಾತನಾಡಿದ ರಾಘವೇಂದ್ರ ಖಾಜನಗೌಡ, ನಗರದಲ್ಲಿ ನಡೆಯುತ್ತಿರುವ ಪುಟ್ ಪಾತ್ ತೆರವು ಕಾಮಗಾರಿಗಳು ಮತ್ತು ರಸ್ತೆ ಗುಂಡಿಗಳಿಂದ ವಿಪರೀತ ಧೂಳು ಉಂಟಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಉಸಿರಾಟದ ತೊಂದರೆ, ಅಸ್ತಮಾ, ಅಲರ್ಜಿ ಮುಂತಾದ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದೆ. ಪಟ್ಟಣ ಪಂಚಾಯತ್ ಹಾಗೂ ಸಿರವಾರ ತಾಲೂಕು ಆಡಳಿತ ಧೂಳು ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಧೂಳಿನಲ್ಲಿಯೇ ಸಂಚರಿಸುವ ದುಸ್ಥಿತಿ ಎದುರಾಗಿದೆ. ಈ ಧೂಳಿನಿಂದಾಗಿ ಅನೇಕರಿಗೆ ಉಸಿರಾಟದ ತೊಂದರೆ, ಅಸ್ತಮಾ, ಅಲರ್ಜಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಮುಂದಿನ 10 ದಿನಗಳಲ್ಲಿ ಧೂಳು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರವೇ ಮಹಿಳಾ ಘಟಕದ ಅಧ್ಯಕ್ಷ ಮಲ್ಲಮ್ಮ,ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಶಂಕ್ರಿ ದೇವತಗಲ್, ಯಲ್ಲಪ್ಪ ದೊರೆ, ನಾಗೇಶ ನವಲಕಲ್, ಭೀಮರಾಯ, ಅಂಜಿನೇಯ್ಯ ಪೂಜಾರಿ, ರಮೇಶ ದೊರೆ, ಅಲಂಪಾಷಾ, ಹನುಮೇಶ್ ಶಾಖಪೂರು, ದೇವಪ್ಪ ನಾಯಕ ನವಲಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







