ರಾಯಚೂರು | ಟ್ಯಾಂಕರ್ ಪಲ್ಟಿಯಾಗಿ ಮೆಥನಾಲ್ ಸೋರಿಕೆ : ಪೊಲೀಸರಿಂದ ಮುನ್ನೆಚ್ಚರಿಕೆ ಕ್ರಮ

ರಾಯಚೂರು : ತಾಲೂಕಿನ ಗುಂಜಳ್ಳಿ ಬಳಿ ಗುರುವಾರ ಸಂಜೆ ಮೆಥನಾಲ್ ದ್ರಾವಣ ಹೊತ್ತೋಯ್ಯುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದ್ದು, ಮಧ್ಯಾನದವರೆಗೆ ಪೊಲೀಸರು ತೆರವು ಕಾರ್ಯ ಮಾಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಯಿತು.
ಮುಂಬೈನಿಂದ ಕರ್ನೂಲ್ ಹೋಗುತ್ತಿದ್ದ ಟ್ಯಾಂಕರ್ ಮೆಥನಾಲ್ ದ್ರಾವಣವನ್ನು ಸಾಗಿಸುತ್ತಿದ್ದ ವೇಳೆ ಗುಂಜಳ್ಳಿ ಸಮೀಪ ತಿರುವಿನಲ್ಲಿ ವೇಗವಾಗಿ ಟ್ಯಾಂಕರನ್ನು ತಿರುಗಿಸಲು ಮುಂದಾದಾಗ ಪಲ್ಟಿಯಾಗಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮೆಥನಾಲ್ ರಾಸಾಯನಿಕ ಅತ್ಯಂತ ಅಪಾಯಕಾರಿ ದ್ರಾವಣವಾದ್ದರಿಂದ ಸಾರ್ವಜನಿಕರಿಗೆ ಯಾವುದೇ ಅರೊಗ್ಯ ಸಮಸ್ಯೆಯಾಗಬಾರದು ಎಂಬ ಹಿನ್ನೆಲೆಯಲ್ಲಿ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿತ್ತು. ಜೊತೆಗೆ ಮುಂಜಾಗೃತಾ ಕ್ರಮವಾಗಿ ಘಟನೆ ನಡೆದ ಸ್ಥಳದ ಸುತ್ತಲೂ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಪುಟ್ಟಮಾದಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.







