ರಾಯಚೂರು | ಶಿಕ್ಷಕರು ಮಕ್ಕಳಿಗೆ ಕಲಿಕೆಯ ವಿಷಯದ ಬಗ್ಗೆ ಆಸಕ್ತಿ ಮೂಡಿಸಿ ಪಾಠ ಮಾಡಿ: ಗಜಾನನ ಬಾಳೆ

ರಾಯಚೂರು ಆಗಸ್ಟ್ 09: ಗಣಿತ , ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಶಿಕ್ಷಕರು ಮಕ್ಕಳ ಕಲಿಕೆಯ ಬಗ್ಗೆ ವಿಶೇಷ ಗಮನ ಹರಿಸಬೇಕು. ಆಯಾ ವಿಷಯಗಳ ಬಗ್ಗೆ ಆಸಕ್ತಿ ಮೂಡುವ ಹಾಗೆ ಪಾಠ ಮಾಡಿದಲ್ಲಿ ವಿಷಯವು ಮಕ್ಕಳಿಗೆ ಮನದಟ್ಟಾಗುತ್ತದೆ ಎಂದು ಸಹಾಯಕ ಆಯುಕ್ತರಾದ ಗಜಾನನ ಬಾಳೆ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆ.9ರಂದು ನಡೆದ ರಾಯಚೂರು ಉಪ ವಿಭಾಗದ ಕೆಆರ್ ಇಐಎಸ್ ಶಾಲೆಗಳ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಶಿಕ್ಷಕರ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಭಾಷಾ ವಿಷಯಗಳ ಶಿಕ್ಷಕರು ಮಕ್ಕಳ ಭಾಷಾ ಸಾಮರ್ಥ್ಯ ಅರಿತು ಪಾಠ ಮಾಡುವ ರೀತಿಯಲ್ಲಿ ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳ ಶಿಕ್ಷಕರು ಮ್ಯಾಪ್, ಡೈಗ್ರಾಮ ಸೇರಿದಂತೆ ಪಾಠೋಪಕರಣಗಳ ಬಳಕೆಗೆ ಹೆಚ್ಚಿನ ಗಮನ ಕೊಡಬೇಕು ಎಂದು ಸಲಹೆ ಮಾಡಿದರು.
ತಹಶೀಲ್ದಾರ್ ಸುರೇಶ ವರ್ಮಾ ಅವರು ಮಾತನಾಡಿ, ನಮ್ಮ ಭಾಗದ ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯ ಇರುತ್ತದೆ. ಅದನ್ನು ಶಿಕ್ಷಕರು ಗುರುತಿಸಬೇಕು. ಸರಿಯಾಗಿ ಓದಿದಾಗ ಭಾಷಾ ವಿಷಯಕ್ಕಿಂತ ಗಣಿತ, ವಿಜ್ಞಾನದಂತಹ ವಿಷಯಗಳಲ್ಲಿಯೇ ಅತಿ ಹೆಚ್ಚು ಅಂಕಗಳನ್ನು ಪಡೆಯಬಹುದಾಗಿದೆ. ಶಿಕ್ಷಕರಿಗೂ ಇದು ತಿಳಿದಿದ್ದು, ಸರಳವಾದ ಕಲಿಕಾ ವಿಧಾನ ಪಾಲನೆ ಮಾಡಬೇಕು ಎಂದು ಸಲಹೆ ಮಾಡಿದರು.
ಮಾನವಿ ತಹಶೀಲ್ದಾರರು ಸಹ ಇದೆ ವೇಳೆ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.





