ರಾಯಚೂರು | ಕಳವು ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ

ಸಾಂದರ್ಭಿಕ ಚಿತ್ರ
ರಾಯಚೂರು: ಜನರ ಗಮನ ಬೇರೆಡೆಗೆ ಸೆಳೆದು ಹಣ ಕಳವು ಮಾಡುತ್ತಿದ್ದ ಇಬ್ಬರು ಅಂತರಾಜ್ಯ ಕಳ್ಳರನ್ನು ಸಿಂಧನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಿಂಧನೂರಿನ ಬಂಗಾರಿ ಕ್ಯಾಂಪಿನ ಕೆ.ಸತ್ಯನಾರಾಯಣ ಅವರು ಆ.17ರಂದು ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಮೂವರು ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿದ್ದರು. ಇ.ಜೆ ಹೊಸಳ್ಳಿ ಕ್ಯಾಂಪ್ನ ಇರ್ಫಾನ್ ಹಣ್ಣಿನ ಅಂಗಡಿಯ ಮುಂದೆ ಬೈಕ್ ನಿಲ್ಲಿಸಿ ಹಣ್ಣು ಖರೀದಿಸಲು ಹೋಗಿದ್ದ ವೇಳೆ, ಸತ್ಯನಾರಾಯಣ ಅವರ ಗಮನ ಬೇರೆಡೆ ಸೆಳೆದು ಅವರ ಬೈಕ್ನ ಸೈಡ್ ಬ್ಯಾಗಿನಲ್ಲಿ ಇಟ್ಟಿದ್ದ 3,30,000 ನಗದು ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಯ ತೀವ್ರತೆಯನ್ನು ಗಮನದಲ್ಲಿಟ್ಟು ಎಸ್ಪಿ ಎಂ.ಪುಟ್ಟಮಾದಯ್ಯ ಐಪಿಎಸ್, ಹೆಚ್ಚುವರಿ ಎಸ್ಪಿಗಳಾದ ಎಸ್.ಜೆ. ಕುಮಾರಸ್ವಾಮಿ, ಜಿ. ಹರೀಶ್ ಹಾಗೂ ಡಿಎಸ್ಪಿ ಬಿ.ಎಸ್.ತಳವಾರ ಮಾರ್ಗದರ್ಶನದಲ್ಲಿ, ಸಿಪಿಐ ವೀರಾರೆಡ್ಡಿ ಹೆಚ್. ನೇತೃತ್ವದಲ್ಲಿ ಪಿಎಸ್ಐ ಮೌನೇಶ್ ರಾಠೋಡ್ ಹಾಗೂ ಸಿಬ್ಬಂದಿ ಶರಣಪ್ಪ, ಗೋಪಾಲ, ಅನಿಲ್ಕುಮಾರ್, ಹಫೀಜ್ ಉಲ್ಲಾ, ಅಮರೇಗೌಡ, ತಿಪ್ಪಣ್ಣ, ಕು. ಸುನೀತಾ ಹಾಗೂ ಅಜೀಮ್ ಪಾಷಾ (ಸಿಡಿಆರ್ ಸೆಲ್, ಡಿಪಿಒ ರಾಯಚೂರು) ಒಳಗೊಂಡ ವಿಶೇಷ ತಂಡವನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸಲಾಯಿತು.
ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಆ.21ರಂದು ಆರೋಪಿತಗಳಾದ ರಮೇಶ್ ಕುಮಾರ ಜಾಧವ, ವೇಣುಗೋಪಾಲ ಎನ್ನುವವರನ್ನು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಬಂಧಿತರಿಂದ 3 ಲಕ್ಷ ರೂ. ನಗದು ಹಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಎರಡು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ ಎಂದು ತಿಳಿದು ಬಂದಿದೆ.







