ರಾಯಚೂರು | ನವೋದಯ ಕಾಲೇಜಿನಲ್ಲಿ ಮೂರು ದಿನ ಮಧುಮೇಹ ಸಂಶೋಧನಾ ಸಂಸ್ಥೆಯ ವಾರ್ಷಿಕ ಸಮ್ಮೇಳನ

ರಾಯಚೂರು: ಕರ್ನಾಟಕ ರಾಜ್ಯ ಮಧುಮೇಹ ಸಂಶೋಧನಾ ಸಂಸ್ಥೆ(ಕೆಆರ್‌ಎಸ್‍ಎಸ್‍ಡಿಐ)ನಿಂದ 21ನೇ ವಾರ್ಷಿಕ ಸಮ್ಮೇಳನ ನಗರದ ನವೋದಯ ವೈದ್ಯಕೀಯ ಕಾಲೇಜಿನಲ್ಲಿ ಡಿ.19 ರಿಂದ 21 ವರೆಗೆ ಮೂರು ದಿನ ನಡೆಯಲಿದೆ ಎಂದು ಸಂಸ್ಥೆ ರಾಜ್ಯಾಧ್ಯಕ್ಷ ಡಾ.ಬಸವರಾಜ ಪಾಟೀಲ್ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಸಕ್ಕರೆಯಿಂದ ದೂರ, ಸುಖಿ ಜೀವನದತ್ತ ಘೋಷವಾಕ್ಯದೊಂದಿಗೆ ಡಿ.19ರಂದು ಮೊದಲ ದಿನ ಕಾರ್ಯಾಗಾರ ನಡೆಯಲಿದ್ದು, ಆರು ವಿಶೇಷ ಉಪನ್ಯಾಸಗಳು ನಡೆಯಲಿವೆ. ಮಧುಮೇಹ ಕುರಿತು ನಡೆದಿರುವ ಹೊಸ ಸಂಶೋಧನೆಗಳು, ಪರಿಹಾರಗಳು, ಸಮಸ್ಯೆಗಳ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ. ಟೈಪ್ -1 ಮಧುಮೇಹಿಗಳೊಂದಿಗೆ ಸಂವಾದ ನಡೆಯಲಿದೆ. ಡಿ.20 ರಂದು ಬೆಳಿಗ್ಗೆ ವಾರ್ಷಿಕ ಸಮ್ಮೇಳನ ಉದ್ಘಾಟನೆಯಾಗಲಿದೆ. ಸಮ್ಮೇಳನದಲ್ಲಿ ಅನೇಕರು ಮಧುಮೇಹ ಆಧಾರಿತ ವಿಷಯಗಳನ್ನು ಮಂಡನೆ ಮಾಡಲಿದ್ದಾರೆ. ಮಧುಮೇಹದ ಕುರಿತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ ಎಂದರು.
ಸಂಜೆ ರಾಯಚೂರು ತಾಲೂಕಿನ ಜೇಗರಕಲ್ ಹೊಸಪೇಟೆ ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ನಡೆಯಲಿದೆ. ಸಂಘಟನೆ ರಾಷ್ಟ್ರೀಯ ಅಧ್ಯಕ್ಷರು ಹಾಗೂ ತಜ್ಞ ಡಾ.ಲಕ್ನೋ ಆಗಮಿಸಲಿದ್ದಾರೆ. ಮಕ್ಕಳಿಗೆ ಬ್ಯಾಗ್, ಗುಕ್ಲೋಮೀಟರ್ ವಿತರಿಸಲಾಗುತ್ತದೆ ಎಂದರು.
ಡಿ.21 ರಂದು ಮಧುಮೇಹದ ಕುರಿತು ಗುಂಪು ಚರ್ಚೆ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ತಜ್ಞರಿಂದ ಉಪನ್ಯಾಸ ಹಾಗೂ ಸಮ್ಮೇಳನದಲ್ಲಿ ನಡೆದ ಚರ್ಚೆಗಳ ಕುರಿತು ಸಮಾಲೋಚನೆ ನಡೆಯಲಿದೆ ಎಂದರು.
ಹಿರಿಯ ವೈಧ್ಯ ಡಾ.ಮಹಾಲಿಂಗಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ಡಾ.ರಾಮಕೃಷ್ಣ ಎಂ.ಆರ್., ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ.ಎಸ್.ಎಸ್.ರೆಡ್ಡಿ, ಡಾ.ಹರಿಪ್ರಸಾದ್, ಡಾ.ಸುರೇಶ್ ಸಗರದ ಇದ್ದರು.







