Raichur | ಟಿಪ್ಪು ಸುಲ್ತಾನ್ ಜಯಂತಿ, ಅನ್ನದಾಸೋಹ ಕಾರ್ಯಕ್ರಮ
ಟಿಪ್ಪು ಸುಲ್ತಾನ್ ಅಳಿಸಲಾಗದ ಹೆಸರು: ಮುಹಮ್ಮದ್ ಶಾಲಂ

ರಾಯಚೂರು: ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ, ಉತ್ತಮ ಆಡಳಿತಗಾರ, ಸಮಾಜ ಸುಧಾರಕ ಹಾಗೂ ಪರಧರ್ಮ ಸಹಿಷ್ಣು ಜಾತ್ಯತೀತ ನಾಯಕ. ಅವರ ಹೆಸರನ್ನು ಉಳಿಸುವ ಪ್ರಶ್ನೆಯಲ್ಲ, ಅದು ಅಳಿಸಲಾಗದ ಹೆಸರು ಎಂದು ಕಾಂಗ್ರೆಸ್ ಮುಖಂಡ ಹಾಗೂ ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮುಹಮ್ಮದ್ ಶಾಲಂ ಹೇಳಿದರು.
ನಗರದ ಕುಲಸುಂಬಿ ಕಾಲೋನಿಯಲ್ಲಿ ಬಡಾವಣೆಯ ನಿವಾಸಿಗಳ ವತಿಯಿಂದ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ಹಾಗೂ ಅನ್ನದಾಸೋಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಅಪ್ರತಿಮ ನಾಯಕ. ತಾಯ್ನಾಡಿನ ರಕ್ಷಣೆಗಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟಿದ್ದರು. ಮೈಸೂರು ಹುಲಿ ಎಂದೇ ಖ್ಯಾತರಾಗಿದ್ದ ಅವರು ಪರಧರ್ಮ ಸಹಿಷ್ಣುತೆಯನ್ನು ಹೊಂದಿದ್ದರು. ಶೃಂಗೇರಿ ಮಠದ ಜೀರ್ಣೋದ್ಧಾರಕ್ಕೆ ನೆರವು ನೀಡಿ ರಕ್ಷಣೆ ಮಾಡಿದ್ದರು. ಆದರೂ ಬಿಜೆಪಿ ಹಾಗೂ ಬಲಪಂಥೀಯ ನಾಯಕರು ರಾಜಕೀಯ ಕಾರಣಗಳಿಗಾಗಿ ಟಿಪ್ಪು ಸುಲ್ತಾನ್ ಅವರನ್ನು ವಿರೋಧಿಸುತ್ತಿರುವುದು ಖಂಡನೀಯ ಎಂದು ಹೇಳಿದರು.
ಮುಖಂಡ ಅಯಣ್ಣ ಗೌಡ ಮಾತನಾಡಿ, ಟಿಪ್ಪು ಸುಲ್ತಾನ್ ರೇಷ್ಮೆ ಕೃಷಿಗೆ ಪ್ರೋತ್ಸಾಹ ನೀಡಿದ್ದರು. ರಾಕೆಟ್ ತಂತ್ರಜ್ಞಾನವನ್ನು ಪರಿಚಯಿಸಿ, ಹಲವು ಸಾಮಾಜಿಕ ಸುಧಾರಣೆಗಳನ್ನು ಕೈಗೊಂಡಿದ್ದರು. ಬ್ರಿಟಿಷರಿಗೆ ನಡುಕ ಹುಟ್ಟಿಸಿದ್ದ ಅವರ ಸಾಧನೆಗಳನ್ನು ಮರೆಯಬಾರದು. ಯಾವುದೋ ಕಾರಣಕ್ಕೆ ಟಿಪ್ಪು ಸುಲ್ತಾನ್ ಅವರನ್ನು ವಿರೋಧಿಸುವುದು ಅವರ ವ್ಯಕ್ತಿತ್ವಕ್ಕೆ ಮಾಡಿದ ಅವಮಾನವಾಗುತ್ತದೆ. ಅವರ ಜೀವನ ಮತ್ತು ಸಾಧನೆಗಳ ಕುರಿತು ಎಲ್ಲರಿಗೂ ತಿಳಿಸಬೇಕಿದೆ ಎಂದು ಸಲಹೆ ನೀಡಿದರು.
ಟಿಪ್ಪು ಸುಲ್ತಾನ್ ಜಿಲ್ಲಾ ಸಮಿತಿಯ ಅಧ್ಯಕ್ಷ ಸೈಯದ್ ಮಾಸೂಮ್ ಅವರು ಟಿಪ್ಪು ಸುಲ್ತಾನ್ ಅವರ ಜೀವನ ಹಾಗೂ ಸಾಧನೆಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದ ಬಳಿಕ ಬೃಹತ್ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬಡಾವಣೆಯ ಸರ್ವಧರ್ಮಗಳ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಮಸೀದಿಯ ಇಮಾಮ್ ಹಾಗೂ ಸ್ಥಳೀಯ ದೇವಸ್ಥಾನದ ಪೂಜಾರಿಗಳು ಪಾಲ್ಗೊಂಡು ಸಹೋದರತ್ವದ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಅವರ ಸಾಧನೆ ಹಾಗೂ ಆಡಳಿತ ಸುಧಾರಣೆಗಳನ್ನು ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಹಮ್ಮದ್ ಮಸ್ತಾನ್, ಮಹಾಂಲಿಂಗಪ್ಪ, ನಗರಸಭೆಯ ಮಾಜಿ ಸದಸ್ಯ ರುದ್ರಪ್ಪ ಅಂಗಡಿ, ಸೈಯದ್ ಮಾಸೂಮ್ ಸಿಯತಲಾಬ್, ಬಡಾವಣೆಯ ಮಸೀದಿಯ ಸದರ್ ಬಾಬಾ, ಮೌಲಾನಾ ಶೇಕ್ ಶೆಕ್ಷಾ ವಲಿ, ರಘು ಮಡಿವಾಳ ಹಾಗೂ ನಿಸಾರ್ ಮೌಲಾನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.






