Raichur | ಪುಟ್‌ಪಾತ್ ತೆರವು ವಿರೋಧಿಸಿ ವ್ಯಾಪಾರಸ್ಥರಿಂದ ರಸ್ತೆ ತಡೆ ಪ್ರತಿಭಟನೆ

ರಾಯಚೂರು: ಮಹಾನಗರ ಪಾಲಿಕೆ ಸಿಬ್ಬಂದಿ ಪುಟ್‌ಪಾತ್ ತೆರವು ಕಾರ್ಯಾಚರಣೆಗೆ ಮುಂದಾದುದನ್ನು ವಿರೋಧಿಸಿ ನಗರದ ವ್ಯಾಪಾರಸ್ಥರು ಮಿಂಚಿನ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ನಗರದ ಮಹಾವೀರ ವೃತ್ತ, ಬಟ್ಟೆ ಬಜಾರ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪುಟ್‌ಪಾತ್ ತೆರವು ಹೆಸರಿನಲ್ಲಿ ಪಾಲಿಕೆ ಸಿಬ್ಬಂದಿ ಪದೇಪದೇ ಬಂದು ಅನಗತ್ಯವಾಗಿ ವ್ಯಾಪಾರಸ್ಥರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪುಟ್‌ಪಾತ್ ತೆರವುಗೊಳಿಸುವ ನೆಪದಲ್ಲಿ ಅಂಗಡಿಗಳ ಮುಂದೆ ಮಳೆಯಿಂದ ರಕ್ಷಣೆಗಾಗಿ ಅಳವಡಿಸಿರುವ ಟಿನ್ ಶೆಡ್‌ಗಳನ್ನೂ ತೆರವುಗೊಳಿಸಲಾಗುತ್ತಿದೆ ಎಂದು ಅವರು ದೂರಿದರು.
ಮುಖಂಡ ಶ್ರೀನಿವಾಸ ಪತಂಗೆ ಮಾತನಾಡಿ, ಮಹಾನಗರ ಪಾಲಿಕೆ ವ್ಯಾಪಾರಸ್ಥರಿಗೆ ನಿರಂತರ ಕಿರುಕುಳ ನೀಡುತ್ತಿದೆ. ಪುಟ್‌ಪಾತ್ ತೆರವು ಹೆಸರಿನಲ್ಲಿ ಅಂಗಡಿಗಳ ಟಿನ್ ಶೆಡ್‌ಗಳನ್ನು ತೆರವುಗೊಳಿಸಲು ದೌರ್ಜನ್ಯ ನಡೆಸಲಾಗುತ್ತಿದೆ. ಸಿಬ್ಬಂದಿಯನ್ನು ಪ್ರಶ್ನಿಸಿದರೆ ಹಲ್ಲೆಗೆ ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.
ಸಣ್ಣಪುಟ್ಟ ವ್ಯಾಪಾರಸ್ಥರು ಅನಗತ್ಯ ತೊಂದರೆಗೆ ಸಿಲುಕಿದ್ದಾರೆ. ಕಳೆದ ತಿಂಗಳು ಚರಂಡಿ ಸ್ವಚ್ಛಗೊಳಿಸುವುದಾಗಿ ಹೇಳಿ ಪ್ರತಿ ಅಂಗಡಿಯಿಂದ 1,000 ರೂ. ವಸೂಲಿ ಮಾಡಲಾಗಿತ್ತು. ಇದೀಗ ಮತ್ತೆ ತೆರವು ಕಾರ್ಯಾಚರಣೆ ನಡೆಸುತ್ತಿರುವುದರಿಂದ ವ್ಯಾಪಾರ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ನೂರಾರು ವ್ಯಾಪಾರಸ್ಥರು ಭಾಗವಹಿಸಿದ್ದರು. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಗಣೇಶ ವಿಸರ್ಜನೆ ಮೆರವಣಿಗೆ ಸಾಗುವ ಮಾರ್ಗದಲ್ಲಿ ರಸ್ತೆಗೆ ಅಡ್ಡಿಯಾಗಿರುವ ಟಿನ್ ಶೆಡ್‌ಗಳು ಹಾಗೂ ಪುಟ್‌ಪಾತ್ ಒತ್ತುವರಿಯನ್ನು ತೆರವುಗೊಳಿಸುವ ಉದ್ದೇಶದಿಂದ ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ವ್ಯಾಪಾರಸ್ಥರ ವಿರೋಧದ ನಡುವೆಯೂ ತೆರವು ಕಾರ್ಯಾಚರಣೆ ಮುಂದುವರಿಯಿತು. ಈ ವೇಳೆ ಸಿಪಿಐ ಉಮೇಶ ಕಾಂಬ್ಳೆ ಸೇರಿದಂತೆ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು.






