ರಾಯಚೂರು | ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ʼತರಬೇತಿ ಕಾರ್ಯಾಗಾರʼ

ರಾಯಚೂರು: ಮಾಹಿತಿ ಕೋರಿ ಬರುವ ಅರ್ಜಿಗಳಿಗೆ ಉಡಾಫೆ ಮಾಡದೇ ಶೀಘ್ರ ಉತ್ತರ ನೀಡಿ ಅರ್ಜಿಗಳನ್ನು ವಿಲೇ ಮಾಡಬೇಕು ಎಂದು ಪೀಠ ಸಂಖ್ಯೆ 4ರ ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟಿ ಹಾಗೂ ಪೀಠ ಸಂಖ್ಯೆ 5ರ ರಾಜಶೇಖರ ಎಸ್ ಅವರು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಆ.16ರಂದು ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ರುದ್ರಣ್ಣ ಹರ್ತಿಕೋಟಿ, ಆಯೋಗವು ಮಾಹಿತಿ ಹಕ್ಕು ಕಾಯಿದೆಯನ್ವಯ ನಿಯಮದಂತೆ 30 ದಿನಗಳಲ್ಲಿ ಮಾಹಿತಿ ನೀಡಿದಿದ್ದರೆ ಉಚಿತವಾಗಿ ನೀಡಬೇಕಾಗುತ್ತದೆ. ಇದು ಸರ್ಕಾರಕ್ಕೆ ಹೊರೆಯಾಗುತ್ತದೆ. ಆದ್ದರಿಂದ ಲಭ್ಯವಿರುವ ಮಾಹಿತಿ ಕೊಡಬೇಕು. ಯಾವುದನ್ನು ಸಹ ಕ್ರೋಢಿಕರಿಸಿ ನೀಡಬೇಕಾಗಿಲ್ಲ ಎಂದು ತಿಳಿಸಿದರು.
ಸಾರ್ವಜನಿಕ ಪ್ರಾಧಿಕಾರಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ನೇಮಕವಾಗಿರುತ್ತಾರೆ. ಆ ಮಾಹಿತಿ ಅಧಿಕಾರಿಯು ಮೊದಲು ಯಾವುದು ಮಾಹಿತಿ, ಯಾವುದು ಮಾಹಿತಿಯಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅರ್ಜಿಗಳಿಗೆ ನಿಗದಿತ ಕಾಲಾವಧಿಯಲ್ಲಿ ಮಾಹಿತಿ ನೀಡಿದರೆ ಅದರಿಂದ ಬ್ಲಾಕ್ ಮೇಲಗರ್‌ಗಳು ಹುಟ್ಟಿಕೊಳ್ಳುವುದಿಲ್ಲ. ನಿಮ್ಮಲ್ಲಿ ಲಭ್ಯವಿರುವ ಮಾಹಿತಿಯನ್ನು ಮೊದಲು ನೀಡಿ, ಯಾವುದೇ ಅರ್ಜಿಯ ಬಗ್ಗೆ ನಿರ್ಲಕ್ಷ್ಯ ಮಾಡಲು ಹೋಗಬೇಡಿ ಎಂದು ತಿಳಿಸಿದರು.
ರಾಜ್ಯ ಮಾಹಿತಿ ಆಯೋಗವು ಗಮನಿಸಿದಂತೆ ಅನೇಕ ಪಿಐಒಗಳು ನಿಯಮಗಳನ್ನು ಸರಿಯಾಗಿ ಓದುವುದಿಲ್ಲ. ಹೀಗೆ ಆಗಬಾರದು ಎಂದು ಆಯುಕ್ತರಾದ ರುದ್ರಣ್ಣ ಹರ್ತಿಕೋಟಿ ಅವರು ಎಚ್ಚರಿಕೆ ನೀಡಿದರು.
ಸೂಕ್ತ ಹಿಂಬರಹ ನೀಡಲು ಸೂಚನೆ:
ಪೀಠ ಸಂಖ್ಯೆ 5ರ ರಾಜ್ಯ ಮಾಹಿತಿ ಆಯುಕ್ತರಾದ ರಾಜಶೇಖರ ಎಸ್ ಅವರು ಮಾತನಾಡಿ, ಮಾಹಿತಿ ಹಕ್ಕು ಅರ್ಜಿ ಸ್ವೀಕೃತಿಯಾದ ಕೂಡಲೇ ಆ ಬಗ್ಗೆ ನಿರ್ಲಕ್ಷ್ಯ ಮಾಡದೇ ವಿಲೇವಾರಿ ಮಾಡಲು ನಿಯಮಾನುಸಾರ ಕ್ರಮ ವಹಿಸಬೇಕು. ಮಾಹಿತಿ ಲಭ್ಯವಿಲ್ಲದಿದ್ದಲ್ಲಿ ಅದಕ್ಕೆ ಸೂಕ್ತ ಹಿಂಬರಹ ನೀಡಬೇಕು ಎಂದು ತಿಳಿಸಿದರು.
ಮಾಹಿತಿ ಹಕ್ಕು ಅರ್ಜಿ ಬಂದ ನಿಗದಿತ ಅವಧಿಯಲ್ಲಿ ಉತ್ತರ ನೀಡಬೇಕು. ಅದರ ಪ್ರತಿಯನ್ನು ಆಯೋಗಕ್ಕು ಸಹ ಕಳುಹಿಸಬೇಕು. ಆನ್‌ಲೈನ್‌ನಲ್ಲಿ ಬಂದಾಗ ಮಾಹಿತಿ ಕೊಟ್ಟಿರುವುದಾಗಿ ಹೇಳುತ್ತಾರೆ. ಆದರೆ ಕೊಟ್ಟಿರುವ ಮಾಹಿತಿಯನ್ನು ನಮಗೆ ಕಳುಹಿಸದ ಕಾರಣ ಆದೇಶ ಮಾಡಲು ಸಮಸ್ಯೆಯಾಗುತ್ತದೆ ಎಂಬುದನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಅರಿಯಬೇಕು ಎಂದು ತಿಳಿಸಿದರು.
ಪ್ರಥಮ ಮೇಲ್ಮನವಿ ಸಲ್ಲಿಸುವ ಅರ್ಜಿಗಳ ವಿಚಾರಣೆಯನ್ನು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳು ನಿಯಮಬದ್ಧವಾಗಿ ಮಾಡಿದರೆ ಸಮಸ್ಯೆಯೇ ಇರುವುದಿಲ್ಲ. ಅನೇಕ ಕಡೆಗಳಲ್ಲಿ ಪ್ರಥಮ ಮೇಲ್ಮನವಿ ವಿಚಾರಣೆಗಳೇ ಸರಿಯಾಗಿ ಆಗುತ್ತಿಲ್ಲ. ಗ್ರಾಮೀಣಾಭಿವೃದ್ಧಿ, ಕಂದಾಯ, ನಗರಾಭಿವೃದ್ಧಿ ಇಲಾಖೆಗಳಿಂದ ಅತಿ ಹೆಚ್ಚಿನ ಅರ್ಜಿಗಳು ಬರುತ್ತಿವೆ. ಇಲಾಖೆಗಳು 4(1)ಎ, 4(1) ಬಿ ಸರಿಯಾಗಿ ರೂಪಿಸಿಲ್ಲ. ಅದರಿಂದಾಗಿ ಸಮಸ್ಯೆ ಹೆಚ್ಚಾಗುತ್ತಿದೆ. 4(1) ಎ ಪ್ರಕಾರ ದಾಖಲೆಗಳ ನಿರ್ವಹಣೆಯಾದರೆ ಹಾಗೂ 4(1)ಬಿ ಯಲ್ಲಿ 17 ಅಂಶಗಳ ಸ್ವಯಂ ಘೋಷಣೆಯಾದರೆ ಪಿಐಒಗಳ ಮೇಲೆ ಹೊರೆ ಸಾಕಷ್ಟು ಕಡಿಮೆಯಾಗಲಿದೆ ಎಂದು ತಿಳಿಸಿದರು. ಯಾವುದೇ ಸಾರ್ವಜನಿಕ ಪ್ರಾಧಿಕಾರದಲ್ಲಿ 4(1)ಎ ಮತ್ತು ಬಿ ಮಾಡಿಲ್ಲ ಎಂಬುದಾದರೆ ಕೂಡಲೇ ಆ ನಿಟ್ಟಿನಲ್ಲಿ ಗಮನ ಹರಿಸುವುದು ಅಗತ್ಯವಾಗಿದೆ ಎಂದರು.
ಮಾಹಿತಿ ಹಕ್ಕು ಕಾಯಿದೆಯಡಿ ಬರುವ ಅರ್ಜಿಗಳ ಬಗ್ಗೆ ಕೆಲವು ಅನುಮಾನಗಳಿವೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವಂತೆ ಕೆಲವರು ಹೇಳುತ್ತಾರೆ. ಆದರೆ ದೃಢೀಕರಣ ಪ್ರತಿ ಬೇಕು ಎಂಬುದನ್ನು ಅರಿಯಬೇಕು. ಮಾಹಿತಿ ಹಕ್ಕು ಅಧಿನಿಯಮದಡಿ ನೀಡಲಾಗಿದೆ ಎಂಬ ಮುದ್ರೆ ಹಾಕಿ ನೀಡಬೇಕು. ಕೆಲವರು ಸಿಡಿ ರೂಪದಲ್ಲಿ ನೀಡಿ ಎಂದು ಕೇಳಿರುತ್ತಾರೆ. ಎಲೆಕ್ಟ್ರಾನಿಕ್ಸ್ ರೂಪದಲ್ಲಿರುವುದನ್ನು ಮಾತ್ರ ಸಿ.ಡಿ.ಯಲ್ಲಿ ನೀಡಬಹುದು. ಎಲ್ಲ ಪುಟಗಳನ್ನು ಸ್ಕ್ಯಾನ್ ಮಾಡಲು ವೆಚ್ಚ ಹೆಚ್ಚಾಗುತ್ತದೆ ಎಂಬುದನ್ನು ತಿಳಿಯಬೇಕು ಎಂದು ಅವರು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳಿಗೆ ಸಲಹೆ ನೀಡಿದರು.
ಕಾರ್ಯಗಾರದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ವಿವಿಧ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳು ಇದ್ದರು.







