Raichur | ರೈತ ಉತ್ಪಾದಕ ಕಂಪನಿಗಳ ನಿರ್ವಹಣೆ, ವ್ಯವಹಾರ ಅಭಿವೃದ್ಧಿ ಕುರಿತು ತರಬೇತಿ ಕಾರ್ಯಾಗಾರ

ರಾಯಚೂರು: ನಗರದ ಕೃಷಿ ವಿಜ್ಞಾನ ಕೇಂದ್ರ, ರಾಯಚೂರು ಮತ್ತು ಬೆಂಗಳೂರಿನ ರೈತ ಉತ್ಪಾದಕ ಕಂಪನಿಗಳ ಉತ್ಕೃಷ್ಟ ಕೇಂದ್ರದ ವತಿಯಿಂದ ಶುಕ್ರವಾರ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತ ಉತ್ಪಾದಕ ಕಂಪನಿಗಳ ವ್ಯವಸ್ಥಾಪಕರು ಹಾಗೂ ನಿರ್ದೇಶಕರಿಗೆ ನಿರ್ವಹಣೆ ಮತ್ತು ವ್ಯವಹಾರ ಅಭಿವೃದ್ಧಿ ಕುರಿತು ಅರಿವು ಮೂಡಿಸುವ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಎ. ಪ್ರಭುರಾಜ, ನಬಾರ್ಡ್‌ನ ನಿರ್ದೇಶಕ ಶ್ರೇಯಸ್, ಲಿಂಗಸುಗೂರು ವಿಭಾಗದ ಉಪ ಕೃಷಿ ನಿರ್ದೇಶಕ ಡಾ. ಮುತ್ತುರಾಜ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ತಿಮ್ಮಣ್ಣ ನಾಯಕ ಹಾಗೂ ಬೆಂಗಳೂರಿನ ರೈತ ಉತ್ಪಾದಕ ಕಂಪನಿಗಳ ಉತ್ಕೃಷ್ಟ ಕೇಂದ್ರದ ಅಧಿಕಾರಿ ಜಯಣ್ಣ ಕಡೂರು ಅತಿಥಿಗಳಾಗಿ ಭಾಗವಹಿಸಿದ್ದರು.
ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಇಲಾಖೆಗಳ ವ್ಯಾಪ್ತಿಯ 50ಕ್ಕೂ ಹೆಚ್ಚು ರೈತ ಉತ್ಪಾದಕ ಕಂಪನಿಗಳ ವ್ಯವಸ್ಥಾಪಕರು ಮತ್ತು ನಿರ್ದೇಶಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಾಗಾರದಲ್ಲಿ ಸಂಶೋಧನಾ ನಿರ್ದೇಶಕ ಡಾ. ಎ.ಆರ್. ಪ್ರಭುರಾಜ ಅವರು ಕೇಂದ್ರ ಸರ್ಕಾರದ ವಿಶೇಷ ಕೃಷಿ ವಲಯ ಯೋಜನೆಯ ಕುರಿತು ವಿವರಿಸಿದರು. ಜಿಲ್ಲಾ ಪಂಚಾಯತ್‌ನ ಅಸಾದುಲ್ಲಾ ಅವರು ಪಿ.ಎಂ.ಎಫ್.ಎಂ.ಇ. ಯೋಜನೆಯ ವೈಶಿಷ್ಟ್ಯಗಳು, ಲಭ್ಯವಿರುವ ಅವಕಾಶಗಳು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹಾಗೂ ಅಗತ್ಯ ದಾಖಲೆಗಳ ಸಲ್ಲಿಕೆ ಕುರಿತು ಮಾಹಿತಿ ನೀಡಿದರು.
ರಾಷ್ಟ್ರೀಯ ಇ-ಮಾರುಕಟ್ಟೆ (ReMS) ವ್ಯವಸ್ಥಾಪಕ ಶಕೀಲ್ ಅಹಮದ್ ಅವರು ಮಾರುಕಟ್ಟೆ ಮಾಹಿತಿ ಹಾಗೂ ವ್ಯವಸ್ಥೆಯ ಕಾರ್ಯನಿರ್ವಹಣೆಯ ಬಗ್ಗೆ ವಿವರಿಸಿದರು. ರೈತ ಉತ್ಪಾದಕ ಕಂಪನಿಗಳ ರಾಜ್ಯ ಒಕ್ಕೂಟದ ವಲಯ ಅಧಿಕಾರಿ ಶ್ರೀನಿವಾಸ ಅವರು ಷೇರುದಾರಿಕೆ (ಶೇರ್ ಹೋಲ್ಡಿಂಗ್) ಮತ್ತು ‘ರೈತ ಸಿರಿ’ ಬ್ರ್ಯಾಂಡಿಂಗ್ ಮೂಲಕ ರೈತ ಉತ್ಪಾದಕ ಕಂಪನಿಗಳಿಗೆ ದೊರೆಯಬಹುದಾದ ಅವಕಾಶಗಳ ಕುರಿತು ಮಾತನಾಡಿದರು.






