ರಾಯಚೂರು | ಕಾರ್ಮಿಕರ ವೇತನ ಪಾವತಿಸುವಂತೆ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದಿಂದ ಅಧಿಕಾರಿಗಳಿಗೆ ಮನವಿ

ರಾಯಚೂರು: ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ ತುಂಗಭದ್ರಾ ನೀರಾವರಿ ಕಾರ್ಮಿಕರ ವೇತನ ಪಾವತಿಸುವಂತೆ ಆಗ್ರಹಿಸಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (AICCTU) ಕೇಂದ್ರ ಸಮಿತಿಯಿಂದ ಶುಕ್ರವಾರ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಯರಮರಸ್ ವೃತ್ತದ ಯರಮರಸ್, ಕಲ್ಲೂರು, ಆರ್ ಡಿಎಸ್, ಸಿರವಾರ, ಮಾನ್ವಿ, ಮಸ್ಕಿ, ಸಿಂಧನೂರು, ಜವಳಗೇರಾ, ತುರವಿಹಾಳ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ 5 ತಿಂಗಳಿಂದ ಬಾಕಿ ವೇತನ ಪಾವತಿಸದೆ ವಿಳಂಬ ಮಾಡಲಾಗಿದೆ. ಆದ್ದರಿಂದ ಕೂಡಲೇ ವೇತನ ಪಾವತಿಸುವಂತೆ ಒತ್ತಾಯಿಸಲಾಯಿತು.
ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಕೆಲಸದಲ್ಲಿ ತೊಡಿಗಿರುವ ಕಾರ್ಮಿಕರಿಗೆ ಟೆಂಡರ್ ನಿಯಮಾವಳಿಗಳಂತೆ ವೇತನ ಪಾವತಿಸದಿರುವುದರಿಂದ ಟೆಂಡರ್ ಪಡೆದ ಗುತ್ತಿಗೆದಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. 1936ರ ವೇತನ ಪಾವತಿ ಕಾಯ್ದೆಯ ಸೆಕ್ಷನ್ 5ರ ಪ್ರಕಾರ ಪ್ರತಿ ತಿಂಗಳ 7ನೇ ತಾರೀಖಿನ ಮೊದಲು ವೇತನವನ್ನು ಪಾವತಿಸಬೇಕು. ಆದರೆ 5 ತಿಂಗಳು ಕಾರ್ಮಿಕರಿಗೆ ವೇತನವನ್ನು ಪಾವತಿಸಲಾಗಿಲ್ಲ. ತಕ್ಷಣ ಬಾಕಿ ಇರುವ ಎಲ್ಲಾ ವೇತನ, ಇಎಸ್‌ಐ, ಇಪಿಎಫ್ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಾಗಲಿಂಗಸ್ವಾಮಿ, ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ ಬಸವರಾಜ್, AICCTU ಜಿಲ್ಲಾಧ್ಯಕ್ಷ ಅಝೀಝ್ ಜಾಗೀರದಾರ, ಭೀಮಣ್ಣ, ಜಗದೀಶ್, ನಿಸಾರ್ ಅಹ್ಮದ್, ಜಿಲಾನಿ ಪಾಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.







