ರಾಯಚೂರು | ತುಂಗಭದ್ರಾ ನೀರಾವರಿ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

ರಾಯಚೂರು: ದೇಶಕ್ಕೆ ಅನ್ನ ನೀಡುವ ರೈತರ ಬೆಳೆಗೆ ಕನಿಷ್ಠ ಬೆಲೆ ಹಾಗೂ ದುಡಿಯುವ ಕಾರ್ಮಿಕ ವರ್ಗಕ್ಕೆ ಕನಿಷ್ಠ ಕೂಲಿ ಸಿಗುತ್ತಿಲ್ಲ. ಆದರೆ ದೇವಸ್ಥಾನಗಳಲ್ಲಿ ಗಂಟೆ ಬಾರಿಸುವವರಿಗೆ ಮತ್ತು ಎಸಿ ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವ ಅಧಿಕಾರಿಗಳಿಗೆ ಐಶಾರಾಮಿ ಸೌಲಭ್ಯಗಳು ದೊರೆಯುತ್ತಿರುವುದು ದುಃಖಕರ ಸಂಗತಿಯಾಗಿದೆ ಎಂದು ಮಾಜಿ ಕಾರ್ಮಿಕ ಸಚಿವ ಹಾಗೂ ಕಲಬುರಗಿಯ ಹಿರಿಯ ಕಾರ್ಮಿಕ ನಾಯಕ ಎಸ್.ಕೆ. ಕಾಂತಾ ಹೇಳಿದರು.
ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ವತಿಯಿಂದ ಆಯೋಜಿಸಿದ್ದ ನೀರಾವರಿ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೈಗಾರಿಕೆ ಮತ್ತು ಕಾರ್ಖಾನೆಗಳ ಮಾಲೀಕರಿಗೆ ಕೋಟ್ಯಾಂತರ ರೂಪಾಯಿ ಸಾಲ, ಸಬ್ಸಿಡಿ ನೀಡಲಾಗುತ್ತಿದ್ದು, ಕೆಲವೊಮ್ಮೆ ಸಾಲ ಮನ್ನಾವನ್ನೂ ಮಾಡಲಾಗುತ್ತಿದೆ. ಆದರೆ ಪ್ರತಿಯೊಂದು ವಸ್ತುವಿನ ಉತ್ಪಾದನೆಗೆ ಶ್ರಮಿಸುವ ರೈತರಿಗೆ ಮತ್ತು ಕಾರ್ಮಿಕರಿಗೆ ಕನಿಷ್ಠ ಸೌಲಭ್ಯವೂ ದೊರೆಯದಿರುವುದು ಗಂಭೀರ ಸಮಸ್ಯೆಯಾಗಿದೆ ಎಂದು ಅವರು ಪ್ರಶ್ನಿಸಿದರು.
ಸರ್ಕಾರಗಳು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿವೆ. ಕಾರ್ಮಿಕರಲ್ಲಿ ಕ್ರಾಂತಿಕಾರಿ ಚಿಂತನೆ ಮೂಡುವ ತನಕ ಮತ್ತು ಜಾತಿ-ಧರ್ಮದ ಆಧಾರದಲ್ಲಿ ಮತ ಹಾಕುವ ಪ್ರವೃತ್ತಿ ಮುಂದುವರಿದರೆ ನ್ಯಾಯ ದೊರೆಯುವುದಿಲ್ಲ ಎಂದು ಹೇಳಿದರು.
ಬಸವಣ್ಣನವರ “ಅರಿವೇ ಗುರು” ಎಂಬ ವಚನವನ್ನು ಉಲ್ಲೇಖಿಸಿದ ಅವರು, ಕಾರ್ಮಿಕರು ಜಾಗೃತರಾಗಬೇಕು. ಅಭಿವೃದ್ಧಿ ರಾಷ್ಟ್ರಗಳಲ್ಲಿ ಕಾರ್ಮಿಕರಿಗೆ ಹೆಚ್ಚಿನ ಗೌರವ ಮತ್ತು ಸೌಲಭ್ಯಗಳಿವೆ. ನಮ್ಮ ದೇಶದಲ್ಲಿಯೂ ವ್ಯವಸ್ಥೆ ಬದಲಾಗಬೇಕಿದೆ. ನ್ಯಾಯಯುತ ಹಕ್ಕುಗಳನ್ನು ಪಡೆಯಲು ಕಾರ್ಮಿಕರು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಮಿಕ ಕಾನೂನು ಬದಲಾವಣೆ ವಿರೋಧ :
ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಪ್ಟನ್ ಡಿ’ರಿಜೋರಿಯಾ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ಬದಲಾಯಿಸುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಕುಗ್ಗಿಸಲು ಪ್ರಯತ್ನಿಸುತ್ತಿದೆ. ಲೇಬರ್ ಕೋಡ್ ಜಾರಿಗೆ ತಂದು ಗುತ್ತಿಗೆ ವ್ಯವಸ್ಥೆಯನ್ನು ಮುಂದುವರಿಸುವ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ “ಶಿಕ್ಷಣ, ಸಂಘಟನೆ, ಹೋರಾಟ” ಎಂಬ ಸಂದೇಶದಂತೆ ಕಾರ್ಮಿಕರು ಸಂಘಟಿತವಾಗಿ ಹೋರಾಟ ನಡೆಸಬೇಕು ಎಂದು ಹೇಳಿದರು.
ಗುತ್ತಿಗೆ ಕಾರ್ಮಿಕರಿಗೆ ಭದ್ರತೆ ಅಗತ್ಯ :
ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಮಾತನಾಡಿ, ಗುತ್ತಿಗೆ ಕಾರ್ಮಿಕರಿಗೆ ಘನತೆಯ ಬದುಕು, ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಸಿಗಬೇಕು. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಿ ಕಾರ್ಮಿಕರ ಶ್ರಮಕ್ಕೆ ತಕ್ಕ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಅಧ್ಯಕ್ಷ ನಾಗಲಿಂಗಸ್ವಾಮಿ ಮಾತನಾಡಿ, ತುಂಗಭದ್ರಾ ನೀರಾವರಿ ಕಾರ್ಮಿಕರನ್ನು ಕಾಯಂ ನೇಮಕ ಮಾಡಬೇಕು. ಕಾರ್ಮಿಕರ ಹಕ್ಕುಗಳಿಗಾಗಿ ನ್ಯಾಯಾಲಯದಲ್ಲಿಯೂ ಹೋರಾಟ ನಡೆಯುತ್ತಿದೆ. ವರ್ಷಪೂರ್ತಿ ಕೆಲಸ ಹಾಗೂ ಸಮಯಕ್ಕೆ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ ಮಾತನಾಡಿ, ಉದ್ಯೋಗ ಭದ್ರತೆ ಹಾಗೂ ಕಾಯಂ ನೇಮಕಕ್ಕಾಗಿ ತೀವ್ರ ಚಳುವಳಿ ಅಗತ್ಯವಿದೆ. ಕಾರ್ಮಿಕರ ಹಕ್ಕುಗಳಿಗಾಗಿ ಎಲ್ಲರೂ ಒಂದಾಗಿ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್, ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ ಬಸವರಾಜ, ಎಐಸಿಸಿಟಿಯು ಜಿಲ್ಲಾಧ್ಯಕ್ಷ ಅಜೀಜ್ ಜಾಗೀರದಾರ, ಸಿದ್ದಪ್ಪ ಗೌಡ ಯರಮರಸ್, ರಾಮರೆಡ್ಡಿ ಕಲ್ಮಲಾ, ಎಂ ಡಿ ರಫಿ ಮಸ್ಕಿ, ಶರಣಪ್ಪ ಉದ್ಬಾಳ, ಜಗದೀಶ್ ನಿಸಾರ್ ಅಹಮದ್ ಭೀಮಣ್ಣ, ತುಂಗಭದ್ರಾ ನೀರಾವರಿ ಕೇಂದ್ರ ವಲಯದ ಯರಮರಸ್, ಸಿರವಾರ, ಸಿಂಧನೂರು, ವಡ್ಡರಟ್ಟಿ, ಬಳ್ಳಾರಿ, ಮುಂಡರಗಿ ಹಾಗೂ ಮುನಿರಾಬಾದ್ ವಿಭಾಗದ ಎಲ್ಲಾ ಕಾರ್ಮಿಕರು ಪಾಲ್ಗೊಂಡಿದ್ದರು.







