Raichur | ಈಚನಾಳದಲ್ಲಿ ಅಸ್ಪೃಶ್ಯತೆ ಆರೋಪ ; ವಿಡಿಯೊ ವೈರಲ್ ಬಳಿಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ, ಪರಿಶೀಲನೆ

ಲಿಂಗಸೂಗೂರು: ತಾಲೂಕಿನ ಈಚನಾಳ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ನಡೆದಿದೆ ಎಂಬ ಆರೋಪದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರವೀಂದ್ರ ಉಪ್ಪಾರ ಅವರು ಬುಧವಾರ ಸಂಜೆ ಗ್ರಾಮಕ್ಕೆ ಭೇಟಿ ನೀಡಿ ಹೋಟೆಲ್‌ನಲ್ಲಿ ದಿಢೀರ್ ಪರಿಶೀಲನೆ ನಡೆಸಿದರು.
ಈಚನಾಳ ಗ್ರಾಮದ ಹೋಟೆಲ್‌ನಲ್ಲಿ ದಲಿತರಿಗೆ ಕುಡಿಯಲು ಲೋಟ ನೀಡದೆ ಮೇಲಿಂದ ನೀರು ಹಾಕಿರುವ ದೃಶ್ಯವಿರುವ ವಿಡಿಯೊ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಹೋಟೆಲ್‌ನಲ್ಲಿದ್ದ ಕೆಲವರು, “ಹಿಂದೆ ಇಂತಹ ಆಚರಣೆ ಇತ್ತು. ಈಗ ಅದರಲ್ಲಿ ಬದಲಾವಣೆ ಮಾಡಿಕೊಂಡಿದ್ದೇವೆ” ಎಂದು ಅಧಿಕಾರಿಗಳ ಮುಂದೆ ಸಮಜಾಯಿಷಿ ನೀಡಿದರು ಎಂದು ತಿಳಿದುಬಂದಿದೆ.
ಇದೇ ವೇಳೆ ಗ್ರಾಮದಲ್ಲಿರುವ ದಲಿತ ಸಮುದಾಯದವರಿಂದಲೂ ಅಧಿಕಾರಿಗಳು ಮಾಹಿತಿ ಸಂಗ್ರಹಿಸಲು ಮುಂದಾದರು. ಆದರೆ ಈ ಕುರಿತು ದಲಿತರು ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದಾರೆಂದು ತಿಳಿದು ಬಂದಿದೆ.
ಗ್ರಾಮದಲ್ಲಿ ದಲಿತರಿಗೆ ಕ್ಷೌರ ಸೇವೆ ನೀಡದಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಕೇಳಿಬರುತ್ತಿದ್ದು, ಈ ಆರೋಪಗಳ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.
ವೈರಲ್ ವಿಡಿಯೊ ಹಾಗೂ ಗ್ರಾಮದಲ್ಲಿ ಕೇಳಿಬಂದಿರುವ ಅಸ್ಪೃಶ್ಯತೆ ಆರೋಪಗಳ ಕುರಿತು ಸಮಾಜ ಕಲ್ಯಾಣ ಇಲಾಖೆ ಪರಿಶೀಲನೆ ನಡೆಸಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.






