Raichur | ವಾಹನಗಳ ಹೊಗೆ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣ: ಇಕ್ರಂ ಪಾಷಾ
ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮ

ರಾಯಚೂರು: ವಾಹನಗಳಿಂದ ಹೊರಸೂಸುವ ಹೊಗೆಯಿಂದ ವಾಯುಮಾಲಿನ್ಯ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇದನ್ನು ನಿಯಂತ್ರಿಸಲು ವಾಹನ ಮಾಲೀಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅರಿತು ಪಾಲಿಸಬೇಕು. ಜೊತೆಗೆ ಪ್ರಾದೇಶಿಕ ಸಾರಿಗೆ ಇಲಾಖೆಯೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಇಕ್ರಂ ಪಾಷಾ ಹೇಳಿದರು.
ನಗರದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಆಯೋಜಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹೊಸ ವಾಹನ ನೋಂದಣಿಯಾದ ಒಂದು ವರ್ಷದ ಬಳಿಕ ಪ್ರತಿ ಆರು ತಿಂಗಳಿಗೊಮ್ಮೆ ವಾಹನಗಳನ್ನು ಕಡ್ಡಾಯವಾಗಿ ಮಾಲಿನ್ಯ ಪರೀಕ್ಷೆಗೆ ಒಳಪಡಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ವಾಹನಗಳ ಬಳಕೆಯನ್ನು ನಿಯಂತ್ರಿಸುವುದು, ಅನಗತ್ಯವಾಗಿ ವಾಹನಗಳನ್ನು ರಸ್ತೆಗೆ ಇಳಿಸದಿರುವುದು ಹಾಗೂ ಕಡಿಮೆ ಅಂತರದ ಪ್ರಯಾಣಕ್ಕೆ ವಾಹನಗಳ ಬಳಕೆಯನ್ನು ಕಡಿಮೆ ಮಾಡುವುದು ಅಗತ್ಯವಾಗಿದೆ. ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವ ಮೂಲಕ ವಾಹನ ದಟ್ಟಣೆ ಮತ್ತು ವಾಯುಮಾಲಿನ್ಯವನ್ನು ತಗ್ಗಿಸಬಹುದು ಎಂದರು.
ಮಾಸಾಚರಣೆ ಅಂಗವಾಗಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಶಾಲಾ-ಕಾಲೇಜುಗಳಲ್ಲಿ ವಾಯುಮಾಲಿನ್ಯ ನಿಯಂತ್ರಣ ಕುರಿತು ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ವಾಯುಮಾಲಿನ್ಯ ತಡೆಗಟ್ಟುವ ಜೊತೆಗೆ ಓಝೋನ್ ಪದರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಾರ್ವಜನಿಕ ಆಸ್ತಿಯೂ ನಮ್ಮದೇ ಎಂಬ ಭಾವನೆ ಪ್ರತಿಯೊಬ್ಬ ನಾಗರಿಕರಲ್ಲಿ ಮೂಡಬೇಕು. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿಯನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ವಾಯುವಿನ ಗುಣಮಟ್ಟ ಉತ್ತಮವಾಗಿದೆ. ಇದಕ್ಕೆ ಇಲ್ಲಿನ ಗಿಡಮರಗಳು ಪ್ರಮುಖ ಕಾರಣವಾಗಿವೆ. ಅವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಹಿಂದೆ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ತೀವ್ರ ವಾಯುಮಾಲಿನ್ಯದಿಂದಾಗಿ ಮನೆಯಿಂದ ಹೊರಬಂದರೆ ಕಣ್ಣುರಿ ಉಂಟಾಗುತ್ತಿತ್ತು. ಕೆಲವರಿಗೆ ಉಸಿರಾಟದ ಸಮಸ್ಯೆಯೂ ಎದುರಾಗುತ್ತಿತ್ತು. ವಾಹನಗಳ ಹೊಗೆ ಹಾಗೂ ನೆರೆಯ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವ ಪದ್ಧತಿ ಇದಕ್ಕೆ ಪ್ರಮುಖ ಕಾರಣವಾಗಿತ್ತು ಎಂದು ತಮ್ಮ ಅನುಭವ ಹಂಚಿಕೊಂಡರು.
ಮೋಟಾರು ವಾಹನ ನಿರೀಕ್ಷಕ ರಾಕೇಶ ಎಂ. ಮಾತನಾಡಿ, ಇಂದು ಬಹುತೇಕರು ವಾಹನಗಳ ಮೇಲೆ ಅವಲಂಬಿತರಾಗಿದ್ದಾರೆ. ಹೆಚ್ಚುತ್ತಿರುವ ಯಾಂತ್ರೀಕರಣದಿಂದ ಮನುಷ್ಯನ ಆರೋಗ್ಯದ ಜತೆಗೆ ಪರಿಸರದ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ವಾಹನಗಳ ನೋಂದಣಿ ಹಾಗೂ ಚಾಲನಾ ಪರವಾನಗಿ ನೀಡುವ ಸಂದರ್ಭದಲ್ಲಿ ವಾಹನ ಮಾಲೀಕರು ಮತ್ತು ಚಾಲಕರಿಗೆ ವಾಯುಮಾಲಿನ್ಯ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಅಧೀಕ್ಷಕಿ ದೀನಾತ್ ಸಾಜೀದಾ, ಮೋಟಾರು ವಾಹನ ನಿರೀಕ್ಷಕಿ ವಿದ್ಯಾಸಾಗರ, ಸಿಬ್ಬಂದಿಗಳಾದ ಅರ್ಜುನ, ಬಿ. ಪ್ರಭು ರಾಜೇಂದ್ರ, ರವೀಂದ್ರ ರೆಡ್ಡಿ, ಅರ್ಜುನ ಚೌಹಾಣ್, ಶಿವಶಂಕರ ಹಾಗೂ ಪವನಕುಮಾರ ಉಪಸ್ಥಿತರಿದ್ದರು.






