ರಾಯಚೂರು | ನರೇಗಾ ಕೂಲಿ ಪಾವತಿ ಮಾಡದ ಗ್ರಾಮ ಪಂಚಾಯಿತಿ ಕಚೇರಿಗೆ ಬೇಲಿ ಹಾಕಿದ ಗ್ರಾಮಸ್ಥರು

ರಾಯಚೂರು: ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡಿದ್ದ ಕೂಲಿಕಾರ್ಮಿಕರಿಗೆ ಕೂಲಿ ಹಣ ಪಾವತಿಸಿಲ್ಲ ಎಂದು ಆರೋಪಿಸಿ ಕೂಲಿಕಾರ್ಮಿಕರು ಆಕ್ರೋಶಗೊಂಡು ಗ್ರಾಮ ಪಂಚಾಯಿತಿ ಕಚೇರಿಗೆ ಬೇಲಿ ಹಾಕಿದ ಘಟನೆ ಶನಿವಾರ ಮಾನ್ವಿ ತಾಲೂಕಿನ ಸುಂಕೇಶ್ವರ ಗ್ರಾಮದಲ್ಲಿ ನಡೆದಿದೆ.
ಮೇ ತಿಂಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆ ಅಡಿಯಲ್ಲಿ ನಾಲಾ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿತ್ತು. ಆ ಕಾಮಗಾರಿಗೆ ಕೆಲಸ ಮಾಡಿದ್ದ ಕೂಲಿಕಾರ್ಮಿಕರಿಗೆ ಕೂಲಿ ಹಣ ಪಾವತಿಸಲು ಅಧಿಕಾರಿಗಳು ನಿರಾಕರಿಸಿರುವುದು ಘಟನೆಗೆ ಕಾರಣ ಎನ್ನಲಾಗಿದೆ.
ಶನಿವಾರ ಮತ್ತೆ ಅದೇ ನಾಲಾ ಹೂಳೆತ್ತುವ ಕಾಮಗಾರಿಗೆ ಕೆಲಸ ಮಾಡಲು ಬರುವಂತೆ ಅಧಿಕಾರಿಗಳು ಕೂಲಿ ಕಾರ್ಮಿಕರಿಗೆ ಹೇಳಿದ್ದರು. ಆದರೆ ಕಾಮಗಾರಿ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತಿತರ ಸಿಬ್ಬಂದಿ ಗೈರಾಗಿದ್ದರು. ಕಾಮಗಾರಿ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿಗಾಗಿ ಮೂರ್ನಾಲ್ಕು ತಾಸು ಕಾದು ಕುಳಿತ ಕೂಲಿಕಾರ್ಮಿಕರು ಅಸಮಾಧಾನಗೊಂಡಿದ್ದಾರೆ. ನಂತರ ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿ ಕೆಲಹೊತ್ತು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಯಾವುದೇ ಅಧಿಕಾರಿ ಬಾರದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಗ್ರಾಮ ಪಂಚಾಯಿತಿ ಕಚೇರಿಗೆ ಬೇಲಿ ಹಾಕಿದರು ಎಂದು ಪ್ರತ್ಯೇಕದರ್ಶಿಗಳು ತಿಳಿಸಿದ್ದಾರೆ.







