ರಾಯಚೂರು | ವಿಶ್ವಕರ್ಮರ ಸಾಧನೆ ಸಮಾಜಕ್ಕೆ ಮಾದರಿ: ಡಾ.ಅಮೃತಾ ಎಸ್.ಚೆನ್ನಾಳ

ರಾಯಚೂರು : ವಿಶ್ವಕರ್ಮರ ಸಾಧನೆಗಳು ಹಾಗೂ ಅವರು ಸಮಾಜಕ್ಕೆ ನೀಡಿದ ಕೊಡುಗೆ ಮಹತ್ವದ್ದಾಗಿದೆ. ಅವರು ತೋರಿಸಿದ ಹಾದಿಯಲ್ಲಿ ಮುಂದುವರೆಯುವುದು ನಮ್ಮ ಕರ್ತವ್ಯ ಎಂದು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ. ಅಮೃತಾ ಎಸ್.ಚೆನ್ನಾಳ ಹೇಳಿದರು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬುಧವಾರ (ಸೆ.17) ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು.
ವಿಶ್ವಕರ್ಮ ಸಮಾಜದವರು ನಿರ್ಮಿಸಿದ ಶಿಲ್ಪಕಲೆಗಳು ಇಂದಿಗೂ ಕಣ್ಮನ ಸೆಳೆಯುತ್ತಿವೆ. ಶಿಲ್ಪಕಲೆ ಮಾತ್ರವಲ್ಲದೆ ಬಂಗಾರದ ಕುಸುರಿ, ಕಬ್ಬಿಣದ ಕೆಲಸದಲ್ಲಿಯೂ ಇವರ ಕೈಚಳಕ ಅಪ್ರತಿಮ. ಮೂರ್ತಿಗಳನ್ನು ಕೆತ್ತುವಾಗ ಇರುವ ತಲ್ಲೀನತೆ, ಸೂಕ್ಷ್ಮತೆ ಇತರರಲ್ಲಿ ಅಪರೂಪ. ಇದು ದೇವರಿಂದ ಬಂದಿರುವ ವರ ಎಂದು ಹೇಳಿದರು.
ಸಮಾಜದ ಪ್ರಗತಿಗೆ ಮಹಿಳಾ ಸಬಲೀಕರಣ ಅತ್ಯವಶ್ಯಕ. ಪುರುಷ–ಮಹಿಳೆಯರು ಸಮಾನವಾಗಿ ನಡೆದು, ವಿಶ್ವಕರ್ಮರ ಆದರ್ಶಗಳನ್ನು ಅನುಸರಿಸಿ ವಿದ್ಯೆ, ಶ್ರಮ, ಕೌಶಲ್ಯ ಹಾಗೂ ಸಂಸ್ಕೃತಿ ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜ ಮುಖಂಡ ರಾಮು ಮಾತನಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪರಶುರಾಮ, ಸಮಾಜ ಮುಖಂಡರು ಬ್ರಮ್ಮ ಗಣೇಶ, ಗಿರೀಶ್ ಆಚಾರಿ, ಡಾ. ವೆಂಕಟೇಶ ಅನ್ವರಿ, ಡಾ.ಮನೋಹರ ವೈ.ಪತ್ತಾರ, ಈಶ್ವರ ವಿಶ್ವಕರ್ಮ, ಬ್ರಹ್ಮಯ್ಯ ಉಟಕನೂರು, ಮಾರುತಿ ಬಡಿಗೇರ್, ಜಯಂತ್ ಆಚಾರಿ, ಈರಣ್ಣ ಬಡಿಗೇರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







