ಬದುಕಿದ್ದರೂ ದಾಖಲೆಯಲ್ಲಿ ‘ಮೃತ’ ಎಂದು ನಮೂದು : ರಾಯಚೂರಿನಲ್ಲಿ ಬಯೋಮೆಟ್ರಿಕ್ ನೀಡದ ಮಹಿಳೆಗೆ ಸಂಕಷ್ಟ!

ಖಾಜಾಬಿ
ರಾಯಚೂರು : ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ನೀಡದ ಕಾರಣಕ್ಕೆ ಜೀವಂತ ಮಹಿಳೆಯನ್ನು ದಾಖಲೆಗಳಲ್ಲಿ ‘ಮೃತ’ ಎಂದು ತೋರಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ತಪ್ಪಿನಿಂದ ಮಹಿಳೆಗೆ ಸರ್ಕಾರಿ ಸೌಲಭ್ಯಗಳಡಿ ಚಿಕಿತ್ಸೆ ದೊರೆಯದೇ ಸಂಕಷ್ಟ ಎದುರಾಗಿದೆ.
ನಗರದ ಎಲ್ಬಿಎಸ್ ನಗರದ ನಿವಾಸಿ ಖಾಜಾಬಿ ಅವರು ಕೂಲಿ ಕೆಲಸಕ್ಕಾಗಿ ಮುಂಬೈಗೆ ತೆರಳಿದ್ದು, ಕಳೆದ ಒಂದು ವರ್ಷದಿಂದ ನ್ಯಾಯಬೆಲೆ ಅಂಗಡಿಗೆ ಹಾಜರಾಗದ ಹಿನ್ನೆಲೆ ಬಯೋಮೆಟ್ರಿಕ್ ನೀಡಲಾಗಿಲ್ಲ. ಇದನ್ನೇ ಆಧಾರ ಮಾಡಿಕೊಂಡು ಅವರ ರೇಷನ್ ಕಾರ್ಡ್ ಅನ್ನು ಸ್ಥಗಿತಗೊಳಿಸಿ, ಬಳಿಕ ದಾಖಲೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ನಮೂದಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇತ್ತೀಚೆಗೆ ಹೃದಯ ಸಂಬಂಧಿತ ತೊಂದರೆಯಿಂದ ಖಾಜಾಬಿ ಅವರನ್ನು ರಾಯಚೂರಿನ ಧರಣಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಯ ಜಯದೇವ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ರೇಷನ್ ಕಾರ್ಡ್ ಅಮಾನ್ಯವಾಗಿರುವುದರಿಂದ ಹಾಗೂ ದಾಖಲೆಗಳಲ್ಲಿ “ಮೃತರು” ಎಂದು ತೋರಿಸುತ್ತಿರುವ ಕಾರಣ ಉಚಿತ ಮತ್ತು ರಿಯಾಯಿತಿ ಚಿಕಿತ್ಸೆ ನೀಡಲು ನಿರಾಕರಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೂ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕೇವಲ ಬಯೋಮೆಟ್ರಿಕ್ ನೀಡದಿರುವ ಕಾರಣಕ್ಕೆ ಜೀವಂತ ವ್ಯಕ್ತಿಯನ್ನು ದಾಖಲೆಗಳಲ್ಲಿ ಮೃತಳಾಗಿ ತೋರಿಸಿರುವುದು ಆಡಳಿತದ ಗಂಭೀರ ದೋಷವಾಗಿದ್ದು, ಇದರ ಪರಿಣಾಮವಾಗಿ ಫಲಾನುಭವಿಗೆ ಮೂಲಭೂತ ಸೌಲಭ್ಯಗಳೇ ನಿರಾಕರಿಸಲ್ಪಟ್ಟಿವೆ. ತಕ್ಷಣವೇ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಂಡು ತಪ್ಪನ್ನು ಸರಿಪಡಿಸಿ, ಮಹಿಳೆಗೆ ನ್ಯಾಯ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.






