Raichur | ಮಹಿಳೆ ಕಾಣೆ : ಪತ್ತೆಗೆ ಮನವಿ

ರಾಯಚೂರು, ಸೆ.30: ದೇವದುರ್ಗ ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿ ವ್ಯಾಪ್ತಿಯ ಮದರಕಲ್ ಗ್ರಾಮದ ತಿಪ್ಪಮ್ಮ ಗಂಡ ಗೋಪಾಲ (35) ಎಂಬ ಮಹಿಳೆ 2024ರ ಸೆ.13ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೊಲಕ್ಕೆ ತೆರಳಿ ಬರುವುದಾಗಿ ಹೇಳಿ ಮನೆಯಿಂದ ಹೋದ ಬಳಿಕ ಕಾಣೆಯಾಗಿದ್ದಾರೆ. ಈ ಕುರಿತು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.126/2024ರಂತೆ ಮಹಿಳೆ ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ತಿಪ್ಪಮ್ಮ ಅವರು ಎಂದಿನಂತೆ ತಮ್ಮ ತಂದೆ–ತಾಯಿಯೊಂದಿಗೆ ಹೊಲಕ್ಕೆ ತೆರಳುವ ಸಂದರ್ಭದಲ್ಲಿ ತಾನು ನಂತರ ಬರುವುದಾಗಿ ಹೇಳಿ ಅಲ್ಲಿಂದ ತೆರಳಿದ್ದರು. ಸಂಜೆ ಕಳೆದರೂ ಹೊಲಕ್ಕೆ ಬಾರದ ಹಿನ್ನೆಲೆಯಲ್ಲಿ ತಂದೆ–ತಾಯಿ ಮನೆಗೆ ಬಂದು ನೋಡಿದಾಗ ಮನೆಯಲ್ಲಿಯೂ ಇರಲಿಲ್ಲ. ಬಳಿಕ ಗ್ರಾಮದಲ್ಲಿ ಹಾಗೂ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಲಾಯಿತು. ಅದೇ ದಿನ ಮಧ್ಯಾಹ್ನ 12 ಗಂಟೆ ಸುಮಾರಿಗೆ ಗೂಗಲ್ ಗ್ರಾಮದ ಕಡೆಗೆ ಬಸ್ ಹತ್ತಿ ಹೋಗಿರುವ ಮಾಹಿತಿ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಸಂಬಂಧಿಕರು ಗಾಣಗಾಪುರ (ಕಲಬುರಗಿ), ಕಲ್ಲೂರು, ಎಡವಳ್ಳಿ (ಆಂಧ್ರ ಪ್ರದೇಶ) ಸೇರಿದಂತೆ ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸಿ ವಿಚಾರಿಸಿದರೂ ಮಹಿಳೆ ಪತ್ತೆಯಾಗಿಲ್ಲ.
ಕಾಣೆಯಾದ ಮಹಿಳೆಯ ಮೈಮೇಲೆ ನರಸಪ್ಪ ದೇವರು ಬರುವುದರಿಂದ ಆಗಾಗ ಭಕ್ತರು ಆಕೆಯನ್ನು ವಿವಿಧ ಊರುಗಳಿಗೆ ದೇವರು ಕೇಳಲು ಕರೆದುಕೊಂಡು ಹೋಗುತ್ತಿರುತ್ತಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಚಹರೆ: 5.6 ಅಡಿ ಎತ್ತರ, ಸದೃಢ ದೇಹ, ಗೋಧಿ ಮೈಬಣ್ಣ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ತೆರಳುವಾಗ ಹಳದಿ ಬಣ್ಣದ ಸೀರೆ ಹಾಗೂ ಹಸಿರು ರವಿಕೆ ಧರಿಸಿದ್ದರು.
ಈ ಮಹಿಳೆಯ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಕೂಡಲೇ ಗಬ್ಬೂರು ಪೊಲೀಸ್ ಠಾಣೆಯ ಮೊಬೈಲ್ ಸಂಖ್ಯೆ 9480803860 ಅಥವಾ ದೇವದುರ್ಗ ಸಿಪಿಐ ಮೊಬೈಲ್ ಸಂಖ್ಯೆ 9480803835ಗೆ ಸಂಪರ್ಕಿಸುವಂತೆ ದೇವದುರ್ಗ ಗ್ರಾಮೀಣ ವೃತ್ತದ ಆರಕ್ಷಕ ವೃತ್ತ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






