ರಾಯಚೂರು | ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಮಹಿಳೆಯರಿಂದ ಪ್ರತಿಭಟನೆ

ರಾಯಚೂರು, ಡಿ.22: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವೈದ್ಯೆಯೊಬ್ಬರಿಗೆ ನೇಮಕಾತಿ ಪತ್ರ ನೀಡುವಾಗ ಹಿಜಾಬ್ ಗೆ ಕೈಹಾಕಿ ಅವಮಾನ ಮಾಡಿದ ಘಟನೆ ಖಂಡಿಸಿ ವಕ್ಫ್ ಬಚಾವ್ ಆಂದೋಲನ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು.
ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ನಿತೀಶ್ ಕುಮಾರ್ ಭಾವಚಿತ್ರಕ್ಕೆ ಚಪ್ಪಲಿಯ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯರು ನಿತೀಶ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಗಾರ್ತಿ ಫರ್ಜಾನಾ ಖಾನುಂ ಮಾತನಾಡಿ, ಭಾರತ ದೇಶದಲ್ಲಿ ಮಹಿಳೆಯರಿಗೆ ಪೂಜನೀಯ ಸ್ಥಾನ ನೀಡಲಾಗಿದೆ. ವೇದ ಉಪನಿಷತ್ತು, ಭಗವದ್ಗೀತೆ ಸೇರಿ ಪವಿತ್ರ ಗ್ರಂಥಗಳು ಗೌರವ ನೀಡಿವೆ. ಆದರೆ ನಿತೀಶ್ ಕುಮಾರ್ ಅವರು ಸಾರ್ವಜನಿಕ ಸಭೆಯಲ್ಲಿ ಮಹಿಳೆಯ ಅಪ್ಪಣೆ ಇಲ್ಲದೆ ಮುಟ್ಟಿ ಬಲವಂತವಾಗಿ ಮುಖಗವಸು ತೆಗೆಯಲು ಯತ್ನಿಸಿ ಅವಮಾನ ಮಾಡಿದ್ದಾರೆ. ಇದು ಆ ಮಹಿಳೆಗೆ ಮಾತ್ರ ಅವಮಾನವಲ್ಲ. ಇಡೀ ಮಹಿಳಾ ಸಮಾಜಕ್ಕೆ ಅವಮಾನ ಮಾಡಿದಂತೆ. ಅವರು ಕ್ಷಮೆಯಾಚಿದ್ದಾರೆ ಎಂದು ಗೊತ್ತಾಗಿದೆ. ಆದರೆ ಸಾರ್ವಜನಿಕವಾಗಿ ಅವಮಾನಿಸಿ ನಂತರ ಕ್ಷಮೆ ಕೇಳುವುದರಿಂದ ಘನತೆ ತರುವಂತದ್ದಲ್ಲ. ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ತಯ್ಯಬಾ, ತಬಸ್ಸುಮ್, ಅಕ್ಬರ್ ನಾಗುಂಡಿ, ತೌಸೀಫ್ ಅಹ್ಮದ್, ಶೇಕ್ ಮಾಸೂಮ್, ಹಾಫೀಜ್ ಮೆಹಬೂಬ್, ಮಹಮ್ಮದ್ ಶಫಿ, ಮುರ್ಷಿದ್ ಜಾನಿಸಾಹೇಬ ಮಹಮ್ಮದ್ ಸಾಹೇಬ್ ಮತ್ತಿತರರು ಇದ್ದರು.





