ರಾಯಚೂರು | ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಸಬಲೀಕರಣಕ್ಕೆ ಸಾಕ್ಷಿ: ಡಾ.ನಂದಿತಾ

ರಾಯಚೂರು: ಈ ಹಿಂದೆ ಮನೆಗಷ್ಟೇ ಸೀಮಿತವಾಗಿದ್ದ ಮಹಿಳೆಯರು ಈಗ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬಂದು ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಇದು ಮಹಿಳಾ ಸ್ವಾಭಿಮಾನ ಮತ್ತು ಸಬಲೀಕರಣಕ್ಕೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ನಂದಿತಾ ಎಂ.ಎನ್. ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಸೋಮವಾರ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣ, ರಾಜಕೀಯ, ವಿಜ್ಞಾನ, ಸಂಸ್ಕೃತಿ ಹಾಗೂ ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ರಂಗೋಲಿ ಸ್ಪರ್ಧೆ ಮಹಿಳೆಯರ ಸಾಮರ್ಥ್ಯವನ್ನು ಪ್ರತಿಬಿಂಬಿಸುವಂತಿದೆ ಎಂದು ಹೇಳಿದರು.
ಮಹಿಳಾ ದಿನಾಚರಣೆ ಹೆಣ್ಣುಮಕ್ಕಳ ಅಸ್ತಿತ್ವ ಮತ್ತು ಗುರಿ ಸಾಧನೆಯನ್ನು ಜಗತ್ತಿಗೆ ಪರಿಚಯಿಸುವ ಮಹತ್ವದ ದಿನವಾಗಿದೆ. ಇಡೀ ಮಾರ್ಚ್ ತಿಂಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗುರುತಿಸುವ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಮಹಿಳೆ ತಾಯಿ, ಸಹೋದರಿ, ಸ್ನೇಹಿತೆ, ಪತ್ನಿ ಹಾಗೂ ಮಗಳಾಗಿ ಸಮಾಜದಲ್ಲಿ ಮಹತ್ವದ ಪಾತ್ರ ವಹಿಸುತ್ತಾಳೆ ಎಂದು ಹೇಳಿದರು.
ಬಹುಬಣ್ಣದ ರಂಗೋಲಿ ಚಿತ್ತಾರ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೃಷ್ಣ ಸಭಾಂಗಣದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳಾ ಸಿಬ್ಬಂದಿ ಬಹುಬಣ್ಣದ ರಂಗೋಲಿ ಮೂಲಕ ಮಹಿಳಾ ಶಕ್ತಿಯನ್ನು ಪ್ರತಿಬಿಂಬಿಸಿದರು.
ನಾಗರತ್ನ ಅವರ ರಂಗೋಲಿ ಭ್ರೂಣದ ಹಂತದಿಂದಲೇ ಹೆಣ್ಣುಮಕ್ಕಳ ಕಾಳಜಿ ವಹಿಸಿದರೆ ಮಹಿಳೆ ಸಮಾಜ ಹಾಗೂ ದೇಶಕ್ಕೆ ಮಹತ್ವದ ಕೊಡುಗೆ ನೀಡುವ ಸಾಧಕಿಯಾಗುತ್ತಾಳೆ ಎಂಬ ಸಂದೇಶ ನೀಡಿತು. ಸುವರ್ಣ ಅವರ ರಂಗೋಲಿ ಹೆಣ್ಣಿನ ಜೀವನದ ಕನಸುಗಳಿಗೆ ಬಣ್ಣ ತುಂಬುವ ಧೈರ್ಯ ಹಾಗೂ ಆತ್ಮವಿಶ್ವಾಸದ ಸಂಕೇತವಾಗಿ ಮೂಡಿಬಂದಿತು. ಶಾಲಿನಿ ಅವರ ರಂಗೋಲಿ ಮಹಿಳೆಯ ದೃಢ ವಿಶ್ವಾಸ, ಸಹನೆ, ಪ್ರಾಮಾಣಿಕತೆ, ಧೈರ್ಯ ಹಾಗೂ ಮಮತೆಯನ್ನು ಪ್ರಕೃತಿಯ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಿತು.
ಗೀತಾ ಅವರ ರಂಗೋಲಿ ನಾರಿಶಕ್ತಿ ಸಮಾಜದ ಪ್ರಗತಿಗೆ ಮೂಲ ಎನ್ನುವ ಸಂದೇಶವನ್ನು ಗ್ರಾಮೀಣ ಸೊಗಡಿನಲ್ಲಿ ಚಿತ್ರಿಸಿತು. ಮೇಘನಾ ಅವರ ರಂಗೋಲಿ ಆರೋಗ್ಯಕರ ತಾಯಿ ಮತ್ತು ಆರೋಗ್ಯವಂತ ಮಗು ಸಮಾಜದ ಸಂಪತ್ತಾಗಿದ್ದು, ಹೆಣ್ಣುಮಗುವನ್ನು ಉಳಿಸಿ ಬೆಳಸಬೇಕು ಎಂಬ ಸಂದೇಶ ನೀಡಿತು. ಲಕ್ಷ್ಮಿ ಅವರ ರಂಗೋಲಿ ಆರೋಗ್ಯ ಸುರಕ್ಷತೆಯಿಂದ ಸುಂದರ ಬದುಕು ಸಾಧ್ಯ ಎನ್ನುವ ಸಂದೇಶವನ್ನು ಕೈಯಲ್ಲಿ ಹಣತೆ ಹಿಡಿದು ಹೆಜ್ಜೆ ಹಾಕುವ ದೃಶ್ಯದ ಮೂಲಕ ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ ತೀರ್ಪುಗಾರರಾದ ಡಾ.ಶೀಲಶ್ರೀ ಮಾತನಾಡಿ, ಯಾವುದೇ ರೇಖಾಚಿತ್ರ ಬಳಸದೆ ರಚಿಸಿದ ರಂಗೋಲಿಗಳನ್ನು ಅಂತಿಮ ಆಯ್ಕೆ ಮಾಡಲಾಗಿದ್ದು, ಬಹುಮಾನಗಳನ್ನು ಮುಂದಿನ ದಿನಗಳಲ್ಲಿ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.







