ರಾಯಚೂರು | ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಆಕ್ರೋಶ

ರಾಯಚೂರು: ಕಳೆದ ಮೂರು ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರವಾಸ ಕೈಗೊಂಡಿದ್ದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ಜಿಲ್ಲೆಯಲ್ಲಿ ಲಕ್ಷಾಂತರ ಸಮಸ್ಯೆಗಳಿದ್ದರೂ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರಕುತ್ತಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸ್ಪಂದನಾ ಕಾರ್ಯಕ್ರಮ, ಮಹಿಳಾ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಮತ್ತು ಪೋಷಣಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ನಂತರ ಅವರು ಮಾತನಾಡಿದರು.
ಜನರಿಂದ ನೇರವಾಗಿ ಅಹವಾಲುಗಳನ್ನು ಸ್ವೀಕರಿಸಿದಾಗ, ಸಂಬಂಧಿಸಿದ ಅಧಿಕಾರಿಗಳು ಸ್ಥಳದಲ್ಲೇ ಇರದೇ ಇದ್ದುದು ಕಂಡು ಅವರಿಗೆ ಆಕ್ರೋಶ ಹುಟ್ಟಿತು. ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ, ಎಲ್ಲೆಡೆ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಅಧಿಕಾರಿಗಳು ಇದ್ದರು. ಆದರೆ ರಾಯಚೂರಿನಲ್ಲಿ ಮೂರು ದಿನಗಳಿಂದ ಪ್ರವಾಸ ಮಾಡುತ್ತಿದ್ದರೂ, ಜಿಲ್ಲಾಧಿಕಾರಿ, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾವುದೇ ಸ್ಪಂದನೆ ನೀಡಿಲ್ಲ. ಸಮಸ್ಯೆಗಳಿಗೆ ಉತ್ತರಿಸಬೇಕಾದವರು ಸಭೆಗೆ ಹಾಜರಾಗದೇ ಇರುವುದರಿಂದ ಸಭೆ ಮೊಟಕುಗೊಳಿಸುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಗೀತಾ ಎಂಬುವವರು ಆಸ್ತಿಗೆ ಇ-ಖಾತೆ ನೀಡಲು ಮೂರು ವರ್ಷಗಳಿಂದ ಪಾಲಿಕೆಯಲ್ಲಿ ಅಲೆದಾಡುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಬಗೆಹರಿದಿಲ್ಲವೆಂದು ನಾಗಲಕ್ಷ್ಮೀ ಚೌಧರಿ ಉದಾಹರಣೆ ನೀಡಿದರು. “ಕ್ಷಣಾರ್ಧದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳೂ ಮೂರು-ನಾಲ್ಕು ವರ್ಷಗಳಿಂದ ಬಾಕಿ ಉಳಿಯುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರಕ್ಕೆ ವರದಿ ಕಳುಹಿಸಿ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದ ಮಹಿಳೆಯೊಬ್ಬರು ತಮ್ಮ ಅಹವಾಲಿನಲ್ಲಿ, ಇಬ್ಬರು ಅಂಧ ಮಕ್ಕಳಿದ್ದರೂ ಜೀವನೋಪಾಯಕ್ಕೆ ಯಾವುದೇ ನೆರವು ದೊರಕುತ್ತಿಲ್ಲವೆಂದು ತಿಳಿಸಿದರು. ಅಂಗನವಾಡಿ ಸಹಾಯಕ ಹುದ್ದೆಗೆ ಅನುಕಂಪ ಆಧಾರದ ಮೇಲೆ ಅರ್ಜಿ ಸಲ್ಲಿಸಿದ್ದರೂ ತಿರಸ್ಕರಿಸಲಾಗಿದೆ. “ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ ಕೂಲಿ ಕೆಲಸ ಮಾಡಬೇಕಾಗಿದೆ. ಊಟಕ್ಕೂ ತೊಂದರೆ ಆಗುತ್ತಿದೆ. ಗ್ರಾಮದಲ್ಲಿ ಯಾವುದಾದರೂ ಉದ್ಯೋಗದ ವ್ಯವಸ್ಥೆ ಮಾಡಿಸಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನವೀನ್ ಕುಮಾರ, ಡಿಡಿಎಲ್‌ರ್ ಅಧಿಕಾರಿ ರೇಷ್ಮಾ, ಜಿಪಂ ಯೋಜನಾಧಿಕಾರಿ ಶರಣ ಬಸವ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.







