ರಾಯಚೂರು | ಜ.4ರಂದು ಮಹಿಳಾ ಪರಿಷತ್ ಉದ್ಘಾಟನೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ : ಅಣ್ಣಪ್ಪ ಮೇಟಿಗೌಡ

ರಾಯಚೂರು :ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳೆಯರಿಗಾಗಿ ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರಾಮುಖ್ಯತೆ ನೀಡುವ ಸಂಸ್ಥೆಯ ಅಗತ್ಯತೆ ಕಂಡು, ಮಹಿಳೆಯರಿಂದ ಮಹಿಳೆಯರಿಗಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ‘ಮಹಿಳಾ ಪರಿಷತ್’ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಣ್ಣಪ್ಪ ಮೇಟಿಗೌಡ ತಿಳಿಸಿದ್ದಾರೆ.
ಮಹಿಳಾ ಪರಿಷತ್‌ನ್ನು ಕೇವಲ ರಾಯಚೂರು ಜಿಲ್ಲೆಗೆ ಸೀಮಿತಗೊಳಿಸದೇ, ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ ವಿಸ್ತರಿಸುವ ಗುರಿ ಹೊಂದಲಾಗಿದೆ. ಸಂಸ್ಥೆಯ ಉದ್ಘಾಟನಾ ಸಮಾರಂಭ, ಸಾಹಿತ್ಯ–ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ.4ರಂದು (ಭಾನುವಾರ) ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಹಿರಿಯ ಸಾಹಿತಿಗಳಾದ ಡಾ. ಜಯಲಕ್ಷ್ಮೀ ಮಂಗಳಮೂರ್ತಿ ಅವರು ಸಂಸ್ಥೆಯನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಸರ್ವಮಂಗಳ ಸಕ್ರಿ ವಹಿಸಿಕೊಳ್ಳಲಿದ್ದಾರೆ. ಪ್ರಸ್ತಾವಿಕ ಭಾಷಣವನ್ನು ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ಮಾಡಲಿದ್ದು, ಜಿಲ್ಲಾಧ್ಯಕ್ಷೆ ಬಸ್ಸಮ್ಮ ಹಿರೇಮಠ ಸ್ವಾಗತಿಸಲಿದ್ದಾರೆ. ಶಾಸಕರಾದ ಡಾ. ಶಿವರಾಜ್ ಎಸ್.ಪಾಟೀಲ್, ಬಸನಗೌಡ ದದ್ದಲ್ ಹಾಗೂ ತಹಶೀಲ್ದಾರ್ ಸುರೇಶ್ ವರ್ಮಾ ಅವರು ಪ್ರಶಸ್ತಿಗಳನ್ನು ಪ್ರದಾನಿಸಲಿದ್ದಾರೆ. ಶಾಸಕರಾದ ಕರೆಮ್ಮ ಜಿ.ನಾಯಕ, ಕೃಷ್ಣ ಶಾವಂತಗೇರಿ, ಡಾ.ಅರುಣಾ ಹಿರೇಮಠ, ಶ್ರೀದೇವಿ ನಾಯಕ, ನಿರ್ಮಲಾ ಬೆಣ್ಣೆ, ವಿಜಯ ರಾಜೇಶ್ವರಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.
ವಿಶೇಷ ಸನ್ಮಾನ ಮತ್ತು ಪದಗ್ರಹಣ :
ಡಿವೈಎಸ್ಪಿ ಶಾಂತವೀರ ಅವರಿಗೆ ವಿಶೇಷ ಸನ್ಮಾನ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಂದಿರಾ ಅವರಿಗೆ ಗೌರವ ಪ್ರದಾನ ಮಾಡಲಾಗುವುದು. ಮಹಿಳಾ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಚಂದ್ರಶೇಖರ ಮಿರ್ಜಾಪುರ, ನಾಗರತ್ನ ಬಿ. ಪಾಟೀಲ್, ವೆಂಕನಗೌಡ ವಟಗಲ್, ಲಲಿತಾ ಬಸವನಗೌಡ ನೆರವೇರಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಜನರಿಗೆ ರಾಷ್ಟ್ರಮಟ್ಟದ ‘ಕಾಯಕ ವಿಭೂಷಣ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು.
ಕವಿಗೋಷ್ಠಿ :
ಕವಿಗೋಷ್ಠಿಯ ಉದ್ಘಾಟನೆಯನ್ನು ಹಿರಿಯ ಸಾಹಿತಿಗಳಾದ ವೀರ ಹನುಮನ್ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಡಾ.ರಾಜಶ್ರೀ ಕಲ್ಲೂರ್ಕರ್ ವಹಿಸಿಕೊಳ್ಳಲಿದ್ದಾರೆ. ಆಶಯ ನುಡಿಯನ್ನು ವೆಂಕಟೇಶ್ ಬಾಗಲವಾಡ ನೀಡಲಿದ್ದು, ಯಶೋಧ ಹಾಗೂ ಧರ್ಮಾವತಿ ಎಸ್. ನಾಯಕ ನಿರೂಪಿಸಲಿದ್ದಾರೆ. ಕವಿಗೋಷ್ಠಿಯಲ್ಲಿ 15 ಕವಿಗಳು ಭಾಗವಹಿಸಲಿದ್ದಾರೆ.
ಭವಿಷ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಮಹಿಳೆಯರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಪರಿಷತ್ ನಿರಂತರವಾಗಿ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ ಅವರು, ಸರ್ವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ.ಸರ್ವಮಂಗಳ ಸಕ್ರಿ, ಉಪಾಧ್ಯಕ್ಷೆ ಸರಿತಾ ಮಹೇಶ, ಯುವ ಘಟಕದ ಅಧ್ಯಕ್ಷೆ ಧರ್ಮಾವತಿ ಎಸ್. ನಾಯಕ ಉಪಸ್ಥಿತರಿದ್ದರು.







