Raichur | ಪತ್ರಕರ್ತರ ರಾಜ್ಯ ಸಮ್ಮೇಳನ ಯಶಸ್ಸಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ: ಶಿವಾನಂದ ತಗಡೂರು

ರಾಯಚೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 41ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ರಾಯಚೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಲು ಎಲ್ಲ ಪತ್ರಕರ್ತರು ಒಗ್ಗಟ್ಟಿನಿಂದ, ಸಮನ್ವಯದಿಂದ ಹಾಗೂ ಸ್ವಯಂಸೇವಕರ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಯಶಸ್ಸಿಗಾಗಿ ಪ್ರತಿಯೊಂದು ಸಮಿತಿಗೂ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ, ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುವ ಅಗತ್ಯವಿದೆ. ಈ ಹಿಂದೆ ಸಮ್ಮೇಳನ ಆಯೋಜನೆ ಕುರಿತು ಹಲವು ಬಾರಿ ಚರ್ಚೆ ನಡೆದಿದ್ದು, ಇದೀಗ ಎಲ್ಲರೂ ಒಮ್ಮತದಿಂದ ಸಮ್ಮೇಳನ ನಡೆಸಲು ಮುಂದಾಗಿರುವುದು ಸಂತಸದ ಸಂಗತಿ ಎಂದರು.
ಸಮ್ಮೇಳನವು ಎರಡು ವರ್ಷಗಳಿಗೊಮ್ಮೆ ನಡೆಯುವ ಮಹತ್ವದ ಕಾರ್ಯಕ್ರಮವಾಗಿದ್ದು, ಹಿಂದಿನ ಸಮ್ಮೇಳನಗಳಿಗಿಂತ ವಿಭಿನ್ನವಾಗಿ, ಅದ್ಭುತವಾಗಿ ಹಾಗೂ ಮೈಲುಗಲ್ಲಾಗುವ ರೀತಿಯಲ್ಲಿ ಆಯೋಜಿಸಬೇಕು. ಇದರಿಂದ ರಾಯಚೂರಿನ ಹೆಸರು ರಾಜ್ಯದ ಪತ್ರಕರ್ತರ ವಲಯದಲ್ಲಿ ಸದಾ ನೆನಪಿನಲ್ಲಿ ಉಳಿಯಲಿದೆ. ಸಮ್ಮೇಳನದ ಯಶಸ್ಸು ಎಲ್ಲರಿಗೂ ಗೌರವ ಮತ್ತು ಶ್ರೇಯಸ್ಸು ತಂದುಕೊಡಲಿದೆ ಎಂದು ತಿಳಿಸಿದರು.
ಪತ್ರಕರ್ತರ ನಡುವೆ ಈ ಹಿಂದೆ ಇದ್ದ ಭಿನ್ನಾಭಿಪ್ರಾಯ, ವೈರುಧ್ಯ ಹಾಗೂ ಬೇಸರಗಳು ಸಂಘಟನೆಯ ಆಂತರಿಕ ವಿಚಾರಗಳಾಗಿದ್ದು, ಅವುಗಳನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಮುಂದುವರಿಯಬೇಕು. ರಿಪೋರ್ಟರ್ಸ್ ಗಿಲ್ಡ್, ಪತ್ರಕರ್ತರ ಸಂಘಟನೆಗಳು, ಸಂಪಾದಕರು ಹಾಗೂ ವಿವಿಧ ಸಂಘಟನೆಗಳು ಒಟ್ಟಾಗಿ ಸಮ್ಮೇಳನದ ಜವಾಬ್ದಾರಿ ನಿರ್ವಹಿಸಬೇಕು. ಸಮ್ಮೇಳನದ ಕೆಲಸದಲ್ಲಿ ಮೇಲು-ಕೀಳು ಎಂಬ ಭಾವನೆ ಇರಬಾರದು. ಯಾವುದೇ ಜವಾಬ್ದಾರಿ ನೀಡಿದರೂ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಇರಬೇಕು ಎಂದರು.
ಸಮ್ಮೇಳನ ಮುಗಿಯುವವರೆಗೂ ಪ್ರತಿಯೊಬ್ಬರೂ ಸ್ವಯಂಸೇವಕರಂತೆ ಕಾರ್ಯನಿರ್ವಹಿಸಬೇಕು. ವೇದಿಕೆಯಲ್ಲೇ ಕುಳಿತುಕೊಳ್ಳುವ ಅಥವಾ ಕೇವಲ ವಿಐಪಿ ಜವಾಬ್ದಾರಿಗಳಿಗೆ ಸೀಮಿತವಾಗುವ ಮನೋಭಾವ ಬಿಟ್ಟು, ಅಗತ್ಯವಿದ್ದಲ್ಲಿ ಯಾವುದೇ ಕೆಲಸ ಮಾಡಲು ಸಿದ್ಧರಾಗಿರಬೇಕು. ರಾಜ್ಯದ ವಿವಿಧ ಜಿಲ್ಲೆಗಳಷ್ಟೇ ಅಲ್ಲದೆ, ಕೇರಳ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ಪತ್ರಕರ್ತರು ಹಾಗೂ ನೇಪಾಳ, ಶ್ರೀಲಂಕಾದಂತಹ ದೇಶಗಳಿಂದಲೂ ಪ್ರತಿನಿಧಿಗಳು ಆಗಮಿಸುವ ನಿರೀಕ್ಷೆಯಿದೆ. ಎರಡು ದಿನಗಳ ಸಮ್ಮೇಳನದಲ್ಲಿ ಅವರಿಗೆ ರಾಯಚೂರಿನ ನೆಲ, ಸಂಸ್ಕೃತಿ, ಆತಿಥ್ಯ ಹಾಗೂ ಅನುಭವಗಳನ್ನು ಪರಿಚಯಿಸುವುದು ದೊಡ್ಡ ಸವಾಲು ಮತ್ತು ಜವಾಬ್ದಾರಿಯಾಗಿದೆ ಎಂದು ಹೇಳಿದರು.
ರಾಯಚೂರಿನಲ್ಲಿ ನಡೆಯುವ ಸಮ್ಮೇಳನವು ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪತ್ರಕರ್ತರಿಗೂ ನೆನಪಿನಲ್ಲಿ ಉಳಿಯುವಂತಾಗಬೇಕು. ಹಿಂದೆ ಶ್ರೀಲಂಕಾದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ರಾಯಚೂರಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನದ ನೆನಪುಗಳನ್ನು ಹಂಚಿಕೊಂಡಿರುವುದನ್ನು ಉಲ್ಲೇಖಿಸಿದ ಅವರು, ಈ ಬಾರಿಯ ಸಮ್ಮೇಳನವೂ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಸಂಘಟಿಸಬೇಕು. ಸಮ್ಮೇಳನ ನಡೆಸುವ ಕುರಿತು ಇದ್ದ ಗೊಂದಲಗಳನ್ನು ಬದಿಗಿಟ್ಟು, ಈಗ ಎಲ್ಲರೂ ಒಗ್ಗಟ್ಟಿನಿಂದ ಯಶಸ್ಸಿನತ್ತ ಸಾಗಬೇಕಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ಲೋಕೇಶ ಮಾತನಾಡಿ, ಸಂಘವು 95 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು, ಶತಮಾನೋತ್ಸವದತ್ತ ಮುನ್ನಡೆಯುತ್ತಿದೆ. ಸಂಘದ 41ನೇ ರಾಜ್ಯ ಸಮ್ಮೇಳನ ರಾಯಚೂರಿನಲ್ಲಿ ನಡೆಯುತ್ತಿರುವುದು ಜಿಲ್ಲೆಯ ಪತ್ರಕರ್ತರಿಗೆ ಹೆಮ್ಮೆಯ ಸಂಗತಿಯಾಗಿದೆ. ರಾಜ್ಯ ಸಂಘದ ಪ್ರಸ್ತುತ ತಂಡ ಅಧಿಕಾರ ವಹಿಸಿಕೊಂಡ ಬಳಿಕ ಮೈಸೂರು, ಮಂಗಳೂರು, ದಾವಣಗೆರೆ, ಕಲಬುರಗಿ, ವಿಜಯಪುರ, ತುಮಕೂರು ಹಾಗೂ ಬೀದರ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಮ್ಮೇಳನ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದೀಗ ರಾಯಚೂರಿನಲ್ಲಿ ಎಂಟನೇ ಪ್ರಮುಖ ಕಾರ್ಯಕ್ರಮ ನಡೆಯಲಿದೆ ಎಂದರು.
ಸಮ್ಮೇಳನದ ಪೂರ್ವಭಾವಿ ಸಿದ್ಧತೆಗಳು, ಉಪಸಮಿತಿಗಳ ರಚನೆ ಹಾಗೂ ಅವುಗಳ ಕಾರ್ಯಾರಂಭ ಸಮ್ಮೇಳನದ ಯಶಸ್ಸಿಗೆ ಮೊದಲ ಹೆಜ್ಜೆಗಳಾಗಿವೆ. ಈಗಾಗಲೇ ಉಪಸಮಿತಿಗಳನ್ನು ರಚಿಸಿರುವುದು ಸಂತಸದ ಸಂಗತಿ. ಪ್ರತಿಯೊಂದು ಸಮಿತಿಯೂ ತನ್ನ ಜವಾಬ್ದಾರಿಯನ್ನು ತಕ್ಷಣ ಆರಂಭಿಸಿ, ಸಂಘಟಿತವಾಗಿ ಕೆಲಸ ಮಾಡುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಜಿಲ್ಲಾ ಅಧ್ಯಕ್ಷ ಗುರುನಾಥ ಮಾತನಾಡಿ, ಕಳೆದ ಒಂದೂವರೆ ತಿಂಗಳಿಂದ ಸಮ್ಮೇಳನದ ಸಿದ್ಧತಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಡಿಸೆಂಬರ್ನಲ್ಲಿ ಆಯೋಜಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಜನವರಿಯಲ್ಲಿ ಸಮ್ಮೇಳನ ನಡೆಯುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಸಮ್ಮೇಳನಕ್ಕಾಗಿ ಸುಮಾರು ಒಂದೂವರೆ ಕೋಟಿಗೂ ಅಧಿಕ ಮೊತ್ತದ ಸಂಪನ್ಮೂಲ ಕ್ರೋಡೀಕರಣ ಮಾಡುವ ಗುರಿ ಹೊಂದಲಾಗಿದೆ. ಜಿಲ್ಲಾ ಸಮಿತಿ ಹಾಗೂ ಹಿರಿಯ ಪತ್ರಕರ್ತರ ಸಹಕಾರದೊಂದಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಸ್ವಾಗತ ಸಮಿತಿ ಹಾಗೂ ವಿವಿಧ ಉಪಸಮಿತಿಗಳ ರಚನೆ ಪ್ರಕ್ರಿಯೆ ನಡೆಯುತ್ತಿದ್ದು, ರಾಯಚೂರಿನಲ್ಲಿ ರಾಜ್ಯ ಸಮ್ಮೇಳನವನ್ನು ವಿಶಿಷ್ಟ ಹಾಗೂ ವಿಭಿನ್ನವಾಗಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಅರವಿಂದ ಕುಲಕರ್ಣಿ, ಬಸವರಾಜ ನಾಗಡದಿನ್ನಿ, ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ಕುಕನೂರು ಸೇರಿದಂತೆ ಹಲವು ಪತ್ರಕರ್ತರು ಉಪಸ್ಥಿತರಿದ್ದರು.






