ರಾಯಚೂರು | ಕಾರ್ಮಿಕರಿಗೆ ಕಾನೂನಿನ ಅರಿವು ಅಗತ್ಯ : ನ್ಯಾ.ಎಚ್.ಎ.ಸಾತ್ವಿಕ್

ರಾಯಚೂರು: ಕಾರ್ಮಿಕರು ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಜೊತೆಗೆ ಕಾನೂನಿನ ಅರಿವು ಪಡೆಯಬೇಕು. ಕನಿಷ್ಠ ವೇತನ ಕಾಯಿದೆ ಸೇರಿದಂತೆ ಹಲವಾರು ಕಾನೂನುಗಳಿವೆ, ಕಾರ್ಮಿಕರು ಅವುಗಳನ್ನು ತಿಳಿದು ಸದ್ಬಳಕೆ ಮಾಡಿಕೊಂಡಾಗ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ಹಿರಿಯ ಶ್ರೇಣಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಎ.ಸಾತ್ವಿಕ್ ಹೇಳಿದ್ದಾರೆ.
ನಗರದ ಕರ್ನಾಟಕ ರಾಜ್ಯ ನೌಕರರ ಜಿಲ್ಲಾ ಸಂಘ ಭವನದಲ್ಲಿ ಬುಧವಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕಾರ್ಮಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ಕಾರ್ಮಿಕರ ಗುರುತಿನ ಪತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ಲಭ್ಯವಿದೆ. ಯಾವುದೇ ವೆಚ್ಚವಿಲ್ಲದೆ ವಕೀಲರನ್ನು ಒದಗಿಸಲಾಗುತ್ತದೆ. ಕಾರ್ಮಿಕರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆಯಬೇಕು. ಜೊತೆಗೆ ಕಾರ್ಖಾನೆಗಳ ಅಭಿವೃದ್ಧಿಗೆ ಕಾರ್ಮಿಕರ ಶ್ರಮವೇ ಆಧಾರ. ಆದ್ದರಿಂದ ಮಾಲಕರು ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ ಅವರು ಮಾತನಾಡಿ, ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಶೈಕ್ಷಣಿಕ, ವೈದ್ಯಕೀಯ, ಹೆರಿಗೆ ಸಹಾಯಧನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೋಂದಣಿ ಮೂಲಕ ಪಡೆದುಕೊಳ್ಳುವಂತೆ ಕಾರ್ಮಿಕರಿಗೆ ಸಲಹೆ ನೀಡಿದರು.
ಜಿಲ್ಲಾ ಕಾರ್ಮಿಕ ಇಲಾಖೆಯ ಮಾಹಿತಿ ಪ್ರಕಾರ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಡಿ ಇ-ಶ್ರಮ ಯೋಜನೆಯಲ್ಲಿ 4,32,405, ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಲ್ಲಿ 4,661, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಲ್ಲಿ 2,685 ಸೇರಿದಂತೆ ಒಟ್ಟು 5,14,749 ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಮದುವೆ ಧನ ಸಹಾಯ 571, ಪ್ರಮುಖ ವೈದ್ಯಕೀಯ 32, ಹೆರಿಗೆ ಧನ 150, ತಾಯಿ–ಮಗು ಸಹಾಯ ಹಸ್ತ 79 ಫಲಾನುಭವಿಗಳು ನೆರವು ಪಡೆದಿದ್ದು, ಇದಕ್ಕಾಗಿ ಒಟ್ಟು 4,44,54,657 ರೂ. ವೆಚ್ಚವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ನಜೀರ್ ಮುಹಮ್ಮದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶರಣಮ್ಮ, ಕಾರ್ಮಿಕ ನಿರೀಕ್ಷಕಿ ಪ್ರಿಯಾಂಕಾ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಎನ್. -ನಾಗರಾಜ, ಶ್ರೀಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







