ರಾಯಚೂರು | ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ರಾಯಚೂರು : ಮಾನವೀಯ ತುರ್ತು ಪರಿಸ್ಥಿತಿಗಳಲ್ಲಿ ಪ್ರತಿಯೊಬ್ಬರ ಮಾನಸಿಕ ಆರೋಗ್ಯ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ನೈಸರ್ಗಿಕ ವಿಪತ್ತುಗಳು, ಮಾನವೀಯ ಸಂಕಷ್ಟಗಳು ಹಾಗೂ ಸಾರ್ವಜನಿಕ ಆರೋಗ್ಯ ತುರ್ತು ಸನ್ನಿವೇಶಗಳಲ್ಲಿ ಪರಸ್ಪರ ಬೆಂಬಲ ಮತ್ತು ಆರೈಕೆ ನೀಡುವುದು ಸಮಾಜದ ಕರ್ತವ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ-ಕಾರ್ಯದರ್ಶಿ ಹಾಗೂ ಗೌರವಾನ್ವಿತ ಹಿರಿಯ ದಿವಾಣಿ ನ್ಯಾಯಾಧೀಶ ಹನುಮಂತ ಎ. ಸಾತ್ವಿಕ್ ಹೇಳಿದರು.
ಅವರು ಅ.17ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮವನ್ನು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಹಾಗೂ ರೀಮ್ಸ್ ಸಂಯುಕ್ತವಾಗಿ ಆಯೋಜಿಸಿತ್ತು.
ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ವಿಪತ್ತುಗಳು, ಯುದ್ಧಗಳು, ಸಂಘರ್ಷಗಳು ಹಾಗೂ ಸಾಂಕ್ರಾಮಿಕ ರೋಗಗಳು ಮಾನಸಿಕ ಒತ್ತಡವನ್ನು ಹೆಚ್ಚಿಸಿವೆ. ಈ ಸಂದರ್ಭಗಳಲ್ಲಿ ಮಾನಸಿಕ ಸ್ಥೈರ್ಯ ನೀಡುವ ಕಾರ್ಯ ಅತ್ಯಗತ್ಯ. ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸದೆ, ಕಾನೂನಿನ ಮೂಲಕವೂ ಅಂತಹ ವ್ಯಕ್ತಿಗಳಿಗೆ ಬೆಂಬಲ ಒದಗಿಸಲಾಗುತ್ತಿದೆ. ಜನರಲ್ಲಿ ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ ಡಾ. ನಂದಿತಾ ಎಂ.ಎನ್. ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಾದ್ಯಂತ ಮಾನಸಿಕ ಆರೋಗ್ಯ ಸೇವೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿಯೇ ಒದಗಿಸಲಾಗುತ್ತಿದೆ. ಮನೋಚೈತನ್ಯ ಕಾರ್ಯಕ್ರಮದಡಿ ತಾಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಮಾಲೋಚನೆ, ಸಲಹೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ತುರ್ತು ಮಾನಸಿಕ ಆರೈಕೆ ಯೋಜನೆಯಡಿ ಶಾಲೆ-ಕಾಲೇಜುಗಳಲ್ಲಿ ಜೀವನ ಕೌಶಲ್ಯ ಹಾಗೂ ಒತ್ತಡ ನಿರ್ವಹಣಾ ತರಬೇತಿಗಳು ನೀಡಲಾಗುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಮನೋರೋಗ ತಜ್ಞ ಡಾ. ಮನೋಹರ ಪತ್ತಾರ ಉಪನ್ಯಾಸ ನೀಡಿದರು. ಡಾ.ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ರೀಮ್ಸ್‌ನ ಪ್ರಭಾರಿ ಡೀನ್ ಡಾ.ಅರವಿಂದ್ ಸಂಗಾವಿ, ಡಾ.ಚಂದ್ರಶೇಖರಯ್ಯ ಸ್ವಾಮಿ, ಡಾ.ಶಿವಕುಮಾರ, ಡಾಮುಹಮ್ಮದ್ ಶಾಕೀರ್ ಸೇರಿದಂತೆ ಹಲವಾರು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪ ಸ್ವಾಗತಿಸಿ ವಂದಿಸಿದರು.







