Raichur | ಬದುಕು ಮತ್ತು ಬರಹದ ನಡುವೆ ಸಾಮರಸ್ಯ ಸಾಧಿಸಿದ ಸಾಹಿತಿ ರಾಮಣ್ಣ ಹವಳೆ: ಬಿ.ಜಿ.ಹುಲಿ

ರಾಯಚೂರು: ವೈಯಕ್ತಿಕ ಬದುಕಿನ ಅನುಭವಗಳು, ಸಾಮಾಜಿಕ ಜವಾಬ್ದಾರಿ ಮತ್ತು ಸಾಹಿತ್ಯದ ಆಶಯಗಳನ್ನು ಒಂದೇ ನೆಲೆಯಲ್ಲಿ ಬೆಸೆದುಕೊಂಡಿರುವ ರಾಮಣ್ಣ ಹವಳೆ ಅವರು ಬದುಕು ಮತ್ತು ಬರಹದ ನಡುವೆ ಸಾಮರಸ್ಯ ಸಾಧಿಸಿದ ಅಪರೂಪದ ಸಾಹಿತಿ ಎಂದು ಹಿರಿಯ ಸಾಹಿತಿ ಬಿ.ಜಿ. ಹುಲಿ ಬಣ್ಣಿಸಿದರು.
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ನಡೆದ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ರಾಮಣ್ಣ ಹವಳೆ ಅವರ ಬದುಕು ಮತ್ತು ಬರಹ ಕುರಿತು ಮಾತನಾಡಿದ ಅವರು, ಹವಳೆ ಅವರ ಬಾಲ್ಯ, ಕುಟುಂಬದ ಹಿನ್ನೆಲೆ, ಶಿಕ್ಷಣದ ಹಾದಿ ಹಾಗೂ ಸಾಹಿತ್ಯಿಕ ವ್ಯಕ್ತಿತ್ವವನ್ನು ಮೆಲುಕು ಹಾಕಿದರು.
ಕಿನ್ನಾಳ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ರಾಮಣ್ಣ ಹವಳೆ ಅವರು ಶಿಕ್ಷಣ ಪಡೆಯುವ ಹಂತದಲ್ಲಿಯೇ ಹಲವು ಅಡೆತಡೆಗಳನ್ನು ಎದುರಿಸಿದ್ದಾರೆ. ರಂಗಾರಿ ಸಮುದಾಯದ ಸಾಮಾನ್ಯ ಕುಟುಂಬದಿಂದ ಬಂದ ಅವರಿಗೆ ಆರಂಭಿಕ ಶಿಕ್ಷಣದ ದಿನಗಳು ಸುಲಭವಾಗಿರಲಿಲ್ಲ. ಏಳನೇ ತರಗತಿಯಲ್ಲಿ ಶಿಕ್ಷಕರ ನೆರವಿನಿಂದ ಉತ್ತೀರ್ಣನಾದೆ ಎಂದು ಯಾವುದೇ ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುವ ಅವರ ಗುಣವೇ ವ್ಯಕ್ತಿತ್ವದ ಪ್ರಾಮಾಣಿಕತೆಯನ್ನು ತೋರಿಸುತ್ತದೆ ಎಂದರು.
ಶಿಕ್ಷಣ ಮುಂದುವರಿಸಲು ಕೊಪ್ಪಳಕ್ಕೆ ತೆರಳಿದಾಗ ವಿಧವೆಯಾಗಿದ್ದ ಅಕ್ಕನ ಮನೆಯಲ್ಲಿ ವಾಸವಿದ್ದರು. ನಾಲ್ಕೈದು ಮಕ್ಕಳನ್ನು ಸಾಕುವ ಹೊಣೆ ಹೊತ್ತು ಟೈಲರಿಂಗ್ ವೃತ್ತಿ ಮಾಡುತ್ತಿದ್ದ ಅಕ್ಕನ ಕಷ್ಟವನ್ನು ಹತ್ತಿರದಿಂದ ಕಂಡ ಅವರು, ಅಕ್ಕನ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನೂ ವಹಿಸಿಕೊಂಡರು. ಕುಟುಂಬದ ಸಂಕಷ್ಟದಲ್ಲಿ ನೆರವಾಗಿ ನಿಂತು, ಅಕ್ಕನ ಮಗಳನ್ನೇ ಜೀವನ ಸಂಗಾತಿಯನ್ನಾಗಿ ಸ್ವೀಕರಿಸಿದ್ದು ಅವರ ಕುಟುಂಬಪ್ರೀತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸ್ವಂತ ಬದುಕಿನಲ್ಲಿ ಆರ್ಥಿಕ ಸಂಕಷ್ಟಗಳಿದ್ದರೂ ಸಹೋದರರ ಜವಾಬ್ದಾರಿಯಿಂದ ಹಿಂದೆ ಸರಿಯಲಿಲ್ಲ. ತಮ್ಮನಿಗೆ ಇಂಜಿನಿಯರಿಂಗ್ ಡಿಪ್ಲೊಮಾ ಓದಿಸಲು ಪ್ರತಿ ತಿಂಗಳು ಹಣ ಕಳುಹಿಸುತ್ತಿದ್ದರು. ಕುಟುಂಬದ ಅಗತ್ಯಗಳಿಗೆ ತಮ್ಮ ದುಡಿಮೆಯ ಒಂದು ಭಾಗವನ್ನು ಮೀಸಲಿಟ್ಟಿದ್ದರು. ಇಂತಹ ತ್ಯಾಗ ಮತ್ತು ಸಂಬಂಧಗಳ ಮೌಲ್ಯವನ್ನು ಅರಿತಿದ್ದ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಸ್ಮರಿಸಿದರು.
ಹವಳೆ ಅವರ ಮತ್ತೊಂದು ವಿಶೇಷ ಗುಣವೆಂದರೆ ಸಂಘಟನಾ ಸಾಮರ್ಥ್ಯ. ಇತರರಿಂದ ಕೆಲಸ ಮಾಡಿಸುವ ಜಾಣ್ಮೆ, ಜವಾಬ್ದಾರಿ ನಿರ್ವಹಿಸುವ ಧೈರ್ಯ ಹಾಗೂ ಕಾರ್ಯಗಳನ್ನು ಅಚ್ಚುಕಟ್ಟಾಗಿ ರೂಪಿಸುವ ಗುಣವನ್ನು ತಮ್ಮ ಆರಂಭಿಕ ದಿನಗಳಲ್ಲಿಯೇ ಪ್ರದರ್ಶಿಸಿದ್ದರು. ತಾವು ಕಂಡ ಕೆಲವು ಘಟನೆಗಳು ಅವರಲ್ಲಿದ್ದ ನಾಯಕತ್ವದ ಗುಣಕ್ಕೆ ಸಾಕ್ಷಿಯಾಗಿವೆ ಎಂದು ತಿಳಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿ ಅನೇಕರು ಬರೆಯುವುದೊಂದು, ಬದುಕುವುದೊಂದು ಎಂಬ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ರಾಮಣ್ಣ ಹವಳೆ ಅವರಲ್ಲಿ ಈ ಎರಡೂ ಬೇರೆಬೇರೆಯಾಗಿಲ್ಲ. ಬದುಕಿನಲ್ಲಿ ಅನುಸರಿಸಿದ ಮೌಲ್ಯಗಳು ಅವರ ಬರಹದಲ್ಲಿಯೂ ವ್ಯಕ್ತವಾಗುತ್ತವೆ. ಅನುಭವ ಮತ್ತು ಅಭಿವ್ಯಕ್ತಿಯ ನಡುವೆ ಸಮತೋಲನ ಕಾಯ್ದುಕೊಂಡಿರುವುದು ಅವರ ಸಾಹಿತ್ಯದ ಪ್ರಮುಖ ಶಕ್ತಿಯಾಗಿದೆ ಎಂದು ವಿಶ್ಲೇಷಿಸಿದರು.
ಸಾಹಿತ್ಯವನ್ನು ಕೇವಲ ಬರವಣಿಗೆಯ ಅಭಿವ್ಯಕ್ತಿಯಾಗಿ ನೋಡದೆ, ಅದರ ಸಾಮಾಜಿಕ ಹಿನ್ನೆಲೆ ಮತ್ತು ಸ್ವರೂಪದ ಆಧಾರದಲ್ಲಿ ವಿಶ್ಲೇಷಿಸಬೇಕಿದೆ. ಈ ನಿಟ್ಟಿನಲ್ಲಿ ಶಿಷ್ಟ ಸಾಹಿತ್ಯ, ಪರಿಶಿಷ್ಟ ಸಾಹಿತ್ಯ ಮತ್ತು ವಿಶಿಷ್ಟ ಸಾಹಿತ್ಯ ಎಂಬ ಮೂರು ಆಯಾಮಗಳಲ್ಲಿ ಸಾಹಿತ್ಯವನ್ನು ಅರ್ಥೈಸಿಕೊಳ್ಳಬಹುದು ಎಂದು ತಮ್ಮ ಸಾಹಿತ್ಯಿಕ ಚಿಂತನೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ರಾಮಣ್ಣ ಹವಳೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಗದಗ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಮರೇಶ ಯತಗಲ್, ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ಶರಣಪ್ಪ ಗೋನಾಳ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತರಾಯ ಶಾಖೆ, ನಾಗರಾಜ ಪಾಟೀಲ್ ಕೊಪ್ಪರ ಸೇರಿದಂತೆ ಹಲವರು ಉಪಸ್ಥಿತರಿದ್ದರು.






