ರಾಯಚೂರು | ಜ.4ರಿಂದ ಮೂರು ದಿನ ಯರಗೇರಾ ಬಡೇಸಾಬ್ ಉರೂಸ್ : ನಿಜಾಮುದ್ದೀನ್

ರಾಯಚೂರು : ತಾಲ್ಲೂಕಿನ ಯರಗೇರಾದ ಹಜರತ್ ಬಡೇಸಾಬ್ ದರ್ಗಾದ 126ನೇ ವರ್ಷದ ಉರೂಸ್ ಜ.4ರಿಂದ 6ರವರೆಗೆ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ದರ್ಗಾದ ಸೇವಾ ಸಮಿತಿ ಅಧ್ಯಕ್ಷ ನಿಜಾಮುದ್ದೀನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪ್ರದಾಯದಂತೆ ಎಳ್ಳ ಅಮಾವಾಸ್ಯೆ ನಂತರ ಬರುವ ಮೊದಲ ಭಾನುವಾರ ಉರೂಸ್ ಆರಂಭವಾಗಲಿದೆ. ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಭಕ್ತರು ಪಾಲ್ಗೊಳ್ಳಲಿದ್ದಾರೆ. ಉರೂಸ್ ಅಂಗವಾಗಿ ಜ.4ರಂದು ರಾತ್ರಿ 10:30ರಿಂದ ಸಜ್ಜಾದೆ ನಶೀನ್ ಜನಾಬ್ ಸೈಯದ್ ಹಫೀಜುಲ್ಲಾ ಖಾದ್ರಿ ಅವರ ಮನೆಯಿಂದ ಗಂಧದ ಮೆರವಣಿಗೆ ಪ್ರಾರಂಭವಾಗಲಿದೆ. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಭಾನುವಾರ ಬೆಳಿಗ್ಗೆ ದರ್ಗಾ ತಲುಪಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ನಿಂದ ಬೀದಿ ದೀಪ, ಕುಡಿಯುವ ನೀರು ಸೇರಿ ಇನ್ನಿತರ ಮೂಲ ಸೌಕರ್ಯ ವ್ಯವಸ್ಥೆ ಮಾಡಲಾಗಿದೆ. ಉರೂಸ್ ಪ್ರಯುಕ್ತ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಗ್ರಾಮದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಚಿವ ಎನ್.ಎಸ್.ಬೋಸರಾಜು, ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹಾಗೂ ಸಂಸದ ಜಿ.ಕುಮಾರ ನಾಯಕ ಅವರನ್ನು ಸನ್ಮಾನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಹಮ್ಮದ್ ರಫಿ, ಎಂ.ಕೆ.ಖಾಜಾ ಹುಸೇನ್, ಮೊಹ್ಮದ್ ನಿಜಾಮುದ್ದೀನ್ ಉಪಸ್ಥಿತರಿದ್ದರು.







