ರಾಯಚೂರು: ರೈಲ್ವೆ ಟಿಕೆಟ್ ದರ ಹೆಚ್ಚಳ ಖಂಡಿಸಿ ಯುವ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ

ರಾಯಚೂರು: ಭಾರತೀಯ ರೈಲ್ವೆ ಇಲಾಖೆಯು ಡಿಸೆಂಬರ್ 26ರಿಂದ ಜಾರಿಗೊಳಿಸಿರುವ ರೈಲ್ವೆ ಟಿಕೆಟ್ ದರ ಹೆಚ್ಚಳವನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ರಾಯಚೂರು ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಸ್ಟೇಷನ್ ಮಾಸ್ಟರ್ ಮುಖಾಂತರ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.
ರೈಲ್ವೆ ಇಲಾಖೆ ಡಿಸೆಂಬರ್ 26ರಿಂದ ಸಾಮಾನ್ಯ ವರ್ಗದಲ್ಲಿ 215 ಕಿ.ಮೀ. ಮೀರಿದ ಪ್ರಯಾಣಕ್ಕೆ ಪ್ರತಿ ಕಿ.ಮೀಗೆ 1 ಪೈಸೆ ಹಾಗೂ ನಾನ್-ಎಸಿ ಮೇಲ್/ಎಕ್ಸ್‌ಪ್ರೆಸ್ ಮತ್ತು ಎಲ್ಲಾ ಎಸಿ ವರ್ಗಗಳ ಟಿಕೆಟ್ ದರದಲ್ಲಿ ಪ್ರತಿ ಕಿ.ಮೀಗೆ 2 ಪೈಸೆ ಹೆಚ್ಚಳ ಮಾಡಿದೆ. ಇದು ಈ ವರ್ಷದ ಎರಡನೇ ಬಾರಿಗೆ ರೈಲ್ವೆ ಟಿಕೆಟ್ ದರ ಏರಿಕೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಟಿಕೆಟ್ ದರ ಏರಿಕೆಯಿಂದ ಪ್ರಯಾಣಿಕರ ಮೇಲೆ, ವಿಶೇಷವಾಗಿ ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅವರು ದೂರಿದರು.
ಇನ್ನೊಂದೆಡೆ ದಿನಬಳಕೆ ವಸ್ತುಗಳ ದರ ನಿರಂತರವಾಗಿ ಹೆಚ್ಚುತ್ತಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಮಕ್ಕಳ ಪಾಲನೆ–ಪೋಷಣೆ ಹಾಗೂ ಶಿಕ್ಷಣ ವೆಚ್ಚಗಳು ದುಬಾರಿಯಾಗಿರುವ ಪರಿಸ್ಥಿತಿಯಲ್ಲಿ ರೈಲ್ವೆ ಟಿಕೆಟ್ ದರ ಏರಿಕೆ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಹೇಳಿದರು. ಕೂಡಲೇ ಈ ದರ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮರಿಸ್ವಾಮಿ ಗಟ್ಟುಬಿಚ್ಚಾಲಿ, ಮಹಮ್ಮದ್ ಶಹಬಾಜ್, ಮಹಮ್ಮದ್ ಫೈಜಲ್ ಖಾನ್, ರಘು ಮಡಿವಾಳ, ಎಂಡಿ ಜಾವೇದ್, ಉಪಾಧ್ಯಕ್ಷರಾದ ಬಿ. ಮಧುಕುಮಾರ, ರಶೀದ್, ದುಗನೂರು ಸುರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.







