Raichur | ಭತ್ತದ ಗದ್ದೆಯಲ್ಲಿ ಯುವಕನ ಮೃತದೇಹ ಪತ್ತೆ: ಕೊಲೆ ಶಂಕೆ

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಹುಸೇನಪುರ ಕ್ರಾಸ್ ಸಮೀಪದ ಭತ್ತದ ಗದ್ದೆಯಲ್ಲಿ ಶನಿವಾರ ಯುವಕನ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆಯೋ ಅಥವಾ ಆಕಸ್ಮಿಕ ಸಾವೋ ಎಂಬ ಅನುಮಾನ ವ್ಯಕ್ತವಾಗಿದೆ.
ಮೃತ ಯುವಕನನ್ನು ಮಾನ್ವಿ ಪಟ್ಟಣದ ರಾಮಣ್ಣ ನಕ್ಕುಂದಿ (28) ಎಂದು ಗುರುತಿಸಲಾಗಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಿಷಯ ತಿಳಿದು ಮಾನ್ವಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.
ಪೊಲೀಸರ ಪ್ರಕಾರ, ಮೃತದೇಹದ ಮೇಲೆ ಮೇಲ್ನೋಟಕ್ಕೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ. ಹೀಗಾಗಿ ಪ್ರಾಥಮಿಕವಾಗಿ ಇದನ್ನು ಕೊಲೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಮೃತ ಯುವಕನ ತಂದೆ-ತಾಯಿ ದುಡಿಯಲು ಬೆಂಗಳೂರಿಗೆ ತೆರಳಿದ್ದು, ಸಂಬಂಧಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ತನಿಖೆಯ ಬಳಿಕ ಸಾವಿನ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಸ್ಥಳೀಯರು, ಮೃತ ಯುವಕ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಅವರನ್ನು ಕೊಲೆ ಮಾಡಿ ಗದ್ದೆಯಲ್ಲಿ ಬಿಸಾಡಿರುವ ಸಾಧ್ಯತೆಯನ್ನೂ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ದಲಿತರ ಮೇಲಿನ ಹಲ್ಲೆ ಹಾಗೂ ಕೊಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.




