ರಾಯಚೂರು| ವೈಟಿಪಿಎಸ್ ಕಲ್ಲಿದ್ದಲು ಕಳ್ಳತನ ಆರೋಪ: ಕ್ರಮಕ್ಕೆ ಒತ್ತಾಯ

ರಾಯಚೂರು: ಯರಮರಸ್ ಕ್ರಿಟಿಕಲ್ ವಿದ್ಯುತ್ ಶಾಖೋತ್ಪನ್ನ ಕೇಂದ್ರ (ವೈಟಿಪಿಎಸ್) ವಿದ್ಯುತ್ ಕೇಂದ್ರಕ್ಕೆ ಪೂರೈಕೆಯಾಗುವ ಕಲ್ಲಿದ್ದಲು ಕಳ್ಳತನದ ಮಾರಾಟ ಅವ್ಯಾಹುತವಾಗಿ ನಡೆಯುತ್ತಿದ್ದು ಪ್ರಕರಣದಲ್ಲಿ ಭಾಗಿಯಾದವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿ ಡಿ.22ರಿಂದ ವೈಟಿಪಿಎಸ್ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ನರಸಿಂಹಲು ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ನರಸಿಂಹಲು, 193 ಕೊಟಿ ರೂ. ವೆಚ್ಚದಲ್ಲಿ ಕಲ್ಲಿದ್ದಲು ಪೂರೈಕೆ ಟೆಂಡರ್ ಆಗಿದ್ದು, ಯರಮರಸ್ ರೈಲು ನಿಲ್ದಾಣ ಬಳಿ ಕಲ್ಲಿದ್ದಲು ಸ್ವಚ್ಚತೆ ಹೆಸರಿನಲ್ಲಿ ಅಕ್ರಮವಾಗಿ ಕಲ್ಲಿದ್ದಲು ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಎರಡು ಬಾರಿ ಕೇಸ್ ದಾಖಲಾದರೂ ಅಕ್ರಮ ಕಳ್ಳತನ ಮಾತ್ರ ನಿಂತಿಲ್ಲ. ಪವರ್ ಮ್ಯಾಕ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಕಿಶೋರ ಬಾಬು, ಸಹಾಯಕ ಮೇಲ್ವಿಚಾರಕ ಹರಿಕೃಷ್ಣ, ವೈಟಿಪಿಎಸ್ ಮುಖ್ಯ ಅಭಿಯಂತರ, ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ರೈಲು ಗುತ್ತಿಗೆದಾರರು ಸೇರಿ ಅಕ್ರಮ ಕಲ್ಲಿದ್ದಲು ಸಾಗಾಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಎಲ್.ವಿ.ಸುರೇಶ್, ಹನುಮೇಶ ಆರೋಲಿ, ಹನುಮೇಶ ಭೇರಿ, ಫಕ್ರುದ್ದೀನ್ ಅಲಿ ಅಹ್ಮದ್ ಭೀಮಣ್ಣ, ಚಿದಾನಂದ ಸೇರಿ ಹಲವರು ಉಪಸ್ಥಿತರಿದ್ದರು.





