ರಾಯಚೂರು | ಹಟ್ಟಿ ಚಿನ್ನದ ಗಣಿ ಅಧಿಕಾರಿಗಳಿಂದ ಅಕ್ರಮ ಮರಳು ದಂಧೆ ಆರೋಪ : ಲೋಕಾಯುಕ್ತರಿಗೆ ದೂರು

ರಾಯಚೂರು: ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ಹಟ್ಟಿ ಚಿನ್ನದ ಗಣಿಯ ನಾಲ್ವರು ಅಧಿಕಾರಿಗಳು ಹಾಗೂ ಇಬ್ಬರು ಗುತ್ತಿಗೆದಾರರ ವಿರುದ್ದ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತೊಮ್ಮೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಸಾಮಾಜಿಕ ಕಾರ್ಯಕರ್ತ ಹನಮಂತಪ್ಪ ಭಂಗಿ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಹನಮಂತಪ್ಪ ಭಂಗಿ, ಕೃಷ್ಣ ನದಿ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆಯ ಹಿಂದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ ಹಾಗೂ ಯಾದಗಿರಿ ಜಿಲ್ಲೆ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರು ಇವರು ಬೆಂಬಲಿಗರಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೇರುಂಡಿ ಮತ್ತು ಕರ್ಕಿಹಳ್ಳಿ ,ಯಾದಗಿರಿ ಜಿಲ್ಲೆಯ ಚೌಡೇಶರಾಳ ಮತ್ತು ಹೀರೆರಾಯಕುಂಪಿಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಈ ಕುರಿತು ಹಟ್ಟಿ ಚಿನ್ನದ ಗಣಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ . ನಿತ್ಯವೂ ಸರ್ಕಾರಕ್ಕೆ ವಂಚನೆಯಾದರೂ ಅಧಿಕಾರಿಗಳು ರಕ್ಷಣೆ ಮಾಡುತ್ತಿದ್ದಾರೆ. ರಾಜಕೀಯ ಪ್ರಭಾವದಿಂದ ಅಕ್ರಮ ದಂಧೆ ನಡೆಯುತ್ತಿದೆ. ಉಸ್ತುವಾರಿ ಸಚಿವರು, ಶಾಸಕರುಗಳೇ ರಕ್ಷಣೆಗೆ ನಿಂತಿರುವುದರಿಂದ ಅಕ್ರಮ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಹಟ್ಟಿ ಚಿನ್ನದ ಗಣಿ ಅಧಿಕಾರಿಗಳು ಸ್ಟಾಕ ಯಾರ್ಡ್‌ಗೆ ಸರಹದ್ದು ನಿಗಧಿಪಡಿಸಿಲ್ಲ. ವೇ ಬ್ರೀಡ್ಸ್ ದತ್ತಾಂಶಗಳನ್ನೇ ಅಳಿಸಿ ಹಾಕಲಾಗಿದೆ. ನಿಗಧಿಗಿಂತ ಹೆಚ್ಚು ಮರಳು ಸಾಗಾಣೆ, ರಾಜಸ್ವ ವಂಚನೆ ನಡೆಯುತ್ತಿದೆ. ಮರಳು ಸಾಗಾಣೆ ಮಾಡುವ ವಾಹನಗಳಿಗೆ ಗುತ್ತಿಗೆದಾರರೇ ಪರವಾನಿಗೆ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಮರಳು ದಾಸ್ತಾನುಗಳಲ್ಲಿ ಸಿಸಿಟಿವಿ ಫೂಟೇಜ್ ಇರುವುದಿಲ್ಲ. ಅಕ್ರಮಕ್ಕೆ ಬೇಕಾದ ಎಲ್ಲ ಕ್ರಮಗಳಿಗೆ ಹಟ್ಟಿಚಿನ್ನದ ಗಣಿ ಅಧಿಕಾರಿಗಳೇ ಕಾರಣವಾಗಿದ್ದಾರೆ. ಸರಕಾರಕ್ಕೆ ಆದಾಯ ಖೋತಾ ಮಾಡಿ ಅಧಿಕಾರಿಗಳು ಗುತ್ತಿಗೆದಾರರು ಹಗಲು ದರೋಡೆ ನಡೆಸುತ್ತಿದ್ದಾರೆ. ಕೂಡಲೇ ಅಕ್ರಮ ತಡೆಯಬೇಕು. ಇಲ್ಲದೇ ಹೋದಲ್ಲಿ ಮತ್ತೊಮ್ಮೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶಿವರಾಜ , ಮಲ್ಲಪ್ಪ ಉಪಸ್ಥಿತರಿದ್ದರು.







