ರಾಯಚೂರು ಜಿಲ್ಲೆಯಲ್ಲಿ ಮಳೆಯ ಅವಾಂತರ : ಹಳ್ಳಗಳು ತುಂಬಿ ಸಂಚಾರ ಅಸ್ತವ್ಯಸ್ತ

ರಾಯಚೂರು, ಸೆ. 15: ಭಾನುವಾರ ರಾತ್ರಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಹಲವು ಕಡೆ ಅವಾಂತರ ಉಂಟಾಗಿದೆ. ಸಿಂಧನೂರಿನ ತಾತ್ಕಾಲಿಕ ಸೇತುವೆ ಕುಸಿದಿದ್ದು, ಲಿಂಗಸುಗೂರು ತಾಲೂಕಿನ ನೀರಲಕೇರಿ, ಈಚನಾಳ, ಹಾವಭಾವಿ, ಜಾಗೀರ ನಂದಿಹಾಳ ಗ್ರಾಮಗಳಲ್ಲಿ ಭಾರೀ ಪರಿಣಾಮ ಕಂಡುಬಂದಿದೆ.
ಲಿಂಗಸುಗೂರಿನ ನೀರಲಕೇರಿಯಲ್ಲಿ ಮಳೆಯಿಂದ ಅಪಾರ ಪ್ರಮಾಣದ ನೀರು ಹರಿದು, ಮುಖ್ಯ ಚರಂಡಿ ತುಂಬಿ ಹೋಗಿ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಸ್ಥಳೀಯರು ಸಂಕಷ್ಟ ಅನುಭವಿಸಿದರು.
ನಾರಾಯಣಪುರ ಮಾರ್ಗದ ಅಡವಿಭಾವಿ ಗ್ರಾಮದ ಮುಖ್ಯರಸ್ತೆಗೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ, ಬೆಳಗಿನ ಜಾವ ವ್ಯಾಪಾರಿಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ವಾಹನ ಸವಾರರು ತೊಂದರೆ ಅನುಭವಿಸಿದರು. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಮರವನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.
ಸೇತುವೆ ಮೇಲೆ ನೀರು, ವಿದ್ಯಾರ್ಥಿಗಳಿಗೆ ಸಂಕಷ್ಟ :
ಹಾಲಭಾವಿ ಹಾಗೂ ಆನೆಹೊಸುರು–ಜಾಗೀರ ನಂದಿಹಾಳ ಸಂಪರ್ಕದ ಹಳ್ಳ ಭರ್ತಿಯಾಗಿ, ಸೇತುವೆ ಮೇಲೆ ನೀರು ಹರಿದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿತು. ಪರೀಕ್ಷೆಗೆ ತೆರಳಬೇಕಾದ ವಿದ್ಯಾರ್ಥಿಗಳು 20 ಕಿಮೀ ಸುತ್ತುವರಿದು ಹೋಗಬೇಕಾದ ಅನಿವಾರ್ಯತೆ ಎದುರಾಯಿತು. ಇದೇ ರೀತಿ ಈಚನಾಳದ ಕುಂಬಾರ ಓಣಿ ಹಳ್ಳ ತುಂಬಿ, ಅಲ್ಲಿನ ನಿವಾಸಿಗಳು 10 ಕಿಮೀ ಸುತ್ತುವರೆಯಬೇಕಾದ ಸ್ಥಿತಿಯುಂಟಾಯಿತು.
ಈಚನಾಳ, ನೀರಲಕೇರಿ, ಹಾಲಭಾವಿ ಗ್ರಾಮಗಳಲ್ಲಿ ಮನೆಗೋಡೆಗಳು ಕುಸಿದು ಸಮಸ್ಯೆ ಉಂಟಾಗಿದೆ. ಮಳೆಯಿಂದ ಉಂಟಾದ ಹಾನಿಯ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಪಿಡಿಒಗಳು ಜಂಟಿಯಾಗಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಸೆ. 15 ಮತ್ತು 16ರಂದು ಮಳೆಯ ಮುನ್ಸೂಚನೆ ಇರುವುದರಿಂದ ಜನರು ಮುಂಜಾಗ್ರತೆ ವಹಿಸಬೇಕೆಂದು ಲಿಂಗಸುಗೂರು ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಎಚ್ಚರಿಕೆ ನೀಡಿದರು.







