ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಸಂಘದಿಂದ ಮೆಡಿಕಲ್ ಅನ್ ಫಿಟ್ ಯೋಜನೆ ಜಾರಿಗೆ ಇಲಾಖೆಯ ಕಾರ್ಯದರ್ಶಿಗೆ ಮನವಿ

ರಾಯಚೂರು: ದೇಶದ ಏಕೈಕ ಚಿನ್ನದ ಗಣಿಯಾಗಿರುವ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಮುಖಂಡರು ಬೆಂಗಳೂರಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರನ್ನು ಭೇಟಿಯಾಗಿ ಗಣಿ ಕಾರ್ಮಿಕರ ಮೆಡಿಕಲ್ ಅನ್ ಫಿಟ್ ಯೋಜನೆ ಜಾರಿಗೆ ಅನುಮೋದಿಸಬೇಕು ಎಂದು ಶುಕ್ರವಾರ ಮನವಿ ಸಲ್ಲಿಸಿದರು.
''ಗಣಿ ಕಂಪನಿ ಕಾರ್ಮಿಕರ ಬಹುದಿನಗಳ ಬೇಡಿಕೆಯಾದ ಮೆಡಿಕಲ್ ಅನ್ ಫಿಟ್ ಯೋಜನೆ ಜಾರಿಗೆ ಈಗಾಗಲೇ ಗಣಿ ಕಂಪನಿ ನಿರ್ದೇಶಕ ಮಂಡಳಿ ಒಪ್ಪಿಗೆ ನೀಡಿದೆ. ಸದ್ಯ ಸರಕಾರದ ಅನುಮೋದನೆ ಅವಶ್ಯಕವಾಗಿದೆ. ಕಾರಣ ಬೇಡಿಕೆ ಪರಿಶೀಲಿಸಿ ಆದಷ್ಟು ಶೀಘ್ರ ಅನುಮೋದನೆ ನೀಡಬೇಕು,'' ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರೋಹಿಣಿ ಸಿಂಧೂರಿ, "ಬೇಡಿಕೆ ಪರಿಶೀಲಿಸಿ ಅನುಮೋದನೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ,'' ಎಂದು ಕಾರ್ಮಿಕ ಸಂಘದ ಮುಖಂಡರು ತಿಳಿಸಿದರು.
ಕಾರ್ಮಿಕ ಸಂಘದ ಅಧ್ಯಕ್ಷ ಕೆ.ಮಹಾಂತೇಶ, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಶಫಿ, ಮುಖಂಡರಾದ ಮಹ್ಮದ್ ಹನೀಫ್, ಮೊಹಿನುದ್ದೀನ್ ಇತರರಿದ್ದರು.





