ಕಾಚಿಗುಡ, ಗದ್ವಾಲ್ ರೈಲುಗಳನ್ನು ಗುಂತಕಲ್ಲುವರೆಗೆ ವಿಸ್ತರಿಸುವಂತೆ ಸಂಸದರಿಗೆ ಮನವಿ

ರಾಯಚೂರು: ಕಾಚಿಗುಡ ಹಾಗೂ ಗದ್ವಾಲ್ ನಿಂದ ರಾಯಚೂರು ನಗರಕ್ಕೆ ಬಂದು ನಿಲುಗಡೆಯಾಗುವ ರೈಲುಗಳನ್ನು ಗುಂತಕಲ್ಲುವರೆಗೂ ವಿಸ್ತರಿಸುವಂತೆ ಮರ್ಚೆಟ್ಹಾಳ ಗ್ರಾಮದ ಸ್ಥಳೀಯ ನಾಗರೀಕರು ಹಾಗೂ ಗ್ರಾಮ ಪಂಚಾಯತ್ ಸದಸ್ಯರ ನಿಯೋಗ ಸಂಸದ ಜಿ.ಕುಮಾರ್ ನಾಯಕ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ನಿಯೋಗದಲ್ಲಿ ಸಮಾಜ ಸೇವಕರಾದ ದಾದಾಪೀರ್, ವೆಂಕನಗೌಡ, ಗೋವರ್ಧನ್ ಯಾದವ್ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಶರಣಪ್ಪ ನಾಯಕ, ವಾಟರ್ ಮ್ಯಾನ್ ನಾಗರಾಜ್ ಇತರರು ಇದ್ದರು.
ದಕ್ಷಿಣ ಮಧ್ಯೆ ರೈಲ್ವೆಯ ರೈಲು ಗಾಡಿ ಸಂಖ್ಯೆ (67784) ಕಾಚಿಗುಡ-ರಾಯಚೂರು ಮೆಮು ಎಕ್ಸ್ ಪ್ರೆಸ್ ಹಾಗೂ ರೈಲು ಗಾಡಿ ಸಂಖ್ಯೆ (67784) ಗದ್ವಾಲ್- ರಾಯಚೂರು ಮೆಮು ಎಕ್ಸ್ ಪ್ರೆಸ್ ಗಾಡಿಯು ಗದ್ವಾಲ್ ರಾಯಚೂರು ನಗರಕ್ಕೆ ಪ್ರತಿನಿತ್ಯ ಓಡಾಟ ನಡೆಸುತ್ತಿದೆ. ಈ ರೈಲು ಗಾಡಿಗಳನ್ನು ಗುಂತಕಲ್ಲುವರೆಗೂ ವಿಸ್ತರಿಸಿದರೆ ನಿತ್ಯ ಸಂಚಾರ ಮಾಡುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು.
ರಾಯಚೂರು ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಮರ್ಚೆಟ್ಹಾಳ ರೈಲ್ವೆ ನಿಲ್ದಾಣವು ಮೇಲ್ದರ್ಜೆಗೆ ಏರಿಸಿರುವುದರಿಂದ ಈ ನಿಲ್ದಾಣವನ್ನು ಅವಲಂಬಿಸಿರುವ ಸುತ್ತಮುತ್ತಲಿನ ಗ್ರಾಮಗಳಾದ ಉಡುಮಗಲ್ ಖಾನಪುರ, ದಿನ್ನಿ ಇನ್ನಿತರ ಊರುಗಳ ಗ್ರಾಮೀಣ ಪ್ರದೇಶದ ಜನರಿಗೆ ನಿತ್ಯದ ವ್ಯಾಪಾರ ವಹಿವಾಟು, ಕೃಷಿ ಚಟುವಟಿಕೆಗಳಿಗೆ ಆಂಧ್ರಪ್ರದೇಶದ ಪ್ರಮುಖ ಕೇಂದ್ರ ಮಂತ್ರಾಲಯ, ಕೊಸಗಿ, ಅದೋನಿ, ಗುಂತಕಲ್ಲಿಗೆ ತೆರಳಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಮರ್ಚೆಟ್ಹಾಳ ಗ್ರಾಮದ ನಿವಾಸಿ ದಾದಾಪೀರ್ ಹೇಳಿದರು.
ಸಂಪರ್ಕದ ಪ್ರಮುಖ ಕೊಂಡಿಯಂತಿರುವ ರೈಲ್ವೆ ಮಾರ್ಗವು ಗ್ರಾಮೀಣ ಪ್ರದೇಶವಾದ ಮರ್ಚೆಟ್ಹಾಳ, ಮಾಟಮಾರಿ, ಹನುಮಪೂರು ಮೂಲಕ ಆಂಧ್ರಪ್ರದೇಶದ ಅದೋನಿ, ಗುಂತಕಲ್ಲಿಗೆ ಸೇರುತ್ತದೆ. ಈ ಮಾರ್ಗದಲ್ಲಿ ಎಕ್ಸಪ್ರೆ ಸ್ ರೈಲುಗಳಿದ್ದರೂ ಈ ನಿಲ್ದಾಣಗಳಲ್ಲಿ ನಿಲ್ಲಲು ಅವಕಾಶ ಕೊಟ್ಟಿರುವುದಿಲ್ಲ. ರಾಯಚೂರು- ಗುಂತಕಲ್ಲು ಮಾರ್ಗದ ಪ್ಯಾಸೆಂಜರ್ ರೈಲು ಮಾತ್ರ ಗ್ರಾಮಾಂತರ ಊರುಗಳಿಗೆ ಆಸರೆಯಾಗಿದೆ. ಆದರೆ ಪ್ಯಾಸೆಂಜರ್ ರೈಲುಗಳು ಸಮಯಕ್ಕೆ ಇರುವುದಿಲ್ಲ. ಬೆಳಿಗ್ಗೆ ಮತ್ತು ರಾತ್ರಿ ಸಮಯವಲ್ಲದ ಸಮಯದಲ್ಲಿ ಸಂಚಾರ ಮಾಡುತ್ತವೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಎನಿಸಿದೆ. ಅದ್ದರಿಂದ ಕಾಚಿಗುಡ ಹಾಗೂ ಗದ್ವಾಲ್ ರೈಲುಗಳನ್ನು ಗುಂತಕಲ್ಲು ಮಾರ್ಗಕ್ಕೂ ವ್ಯಾಪಿಸಿದರೆ ಅನುಕೂಲವಾಗುತ್ತದೆ ಎಂದು ಗ್ರಾಮ ಪಂಚಾಯತ್ ಸದಸ್ಯ ಶರಣಪ್ಪ ನಾಯಕ ಸಂಸದರಲ್ಲಿ ಮಾನವಿ ಮಾಡಿದರು.







